ಹೊಳಹು

ಬದುಕು ಒಂದೇ ಬಗೆಯದ್ದಲ್ಲ, ಮಗ್ಗುಲು ಪಡೆಯುತ್ತಿರುತ್ತದೆ. ನಾವು ತಿರುಗುವುದನ್ನು ಕಲಿತುಕೊಳ್ಳಬೇಕು

Páginas

ಎಲ್ಲ ಜವಾಬ್ದಾರಿಗಳು ಪತ್ರಕರ್ತನದ್ದೇಯಲ್ಲ !

Wednesday, March 17, 2010

ಎಸ್.ಡಿ.ಎಂ ಕಾಲೇಜಿನ ಸ್ನಾತಕೋತ್ತರ ಪತ್ರಿಕೋದ್ಯಮ ವಿದ್ಯಾರ್ಥಿ ರಾಕೇಶ್ ಎನ್. ಎಸ್. ಬರೆದ ಲೇಖನವಿದು. ಓದಿ ಚರ್ಚೆ ಮುಂದುವರಿಸಿ

ಹೀಗೊಂದು ನೈಜ ಮೆಸೆಜ್ ಸಂಭಾಷಣೆ.

ಇವತ್ತು ನೀವು ಸೂಪರ್ಬ್ ಆಗಿ ಕಾಣುತ್ತಿದ್ದೀರಿ...

ಥ್ಯಾಂಕ್ಯೂ, ಹು ಇಸ್ ದಿಸ್?

ನಾನು ನಿಮ್ಮ ಅಭಿಮಾನಿ...

ಅಭಿಮಾನಿಯಾ? ವೆರಿ ನೈಸ್. ನೀವ್ಯಾಕೆ ನನ್ನ ಅಭಿಮಾನಿ?

ನಿಮ್ಮ ಡ್ರೆಸ್ ಸೆನ್ಸ್, ಮಾತನಾಡೋ ಸ್ಟೈಲ್, ನಿಮ್ಮ ಕಣ್ಣು... ಅದ್ಬುತ ಅದಕ್ಕೆ...

ನೀವು ನನ್ನನ್ನು ಎಷ್ಟು ದಿನದಿಂದ ನೋಡುತ್ತಿದ್ದೀರಿ?

15 ದಿನದಿಂದ...

ಹೌದಾ! ನಿಮ್ಮ ಹೆಸರು ಹೇಳಿ ಪ್ಲೀಸ್.

ಇಲ್ಲ, ನೀವೇ ಹುಡುಕಿ... ಹೀಗೆ ಮುಂದುವರಿದ ಈ ಮೆಸೆಜ್ ಅವಳು ತನ್ನ ಮನೆ ವಿಳಾಸ ಕೊಡುವ ತನಕ ತಲುಪಿತ್ತು. ನಂತರ ನಾವು ಭೇಟಿಯಾಗುವ ದಿನ, ಸ್ಥಳ ಎಲ್ಲ ನಿಗದಿಯಾಯಿತು ಕೂಡ.

ವಾಸ್ತವವಾಗಿ ಆ ಹುಡುಗಿ ನನಗೆ ಪರಿಚಿತಳು. ಅವಳಿಗೂ ನನ್ನ ಪರಿಚಯವಿದ್ದೆ ಇದೆ. ಆದರೆ ಇದು ನನ್ನ ನಂಬರ್ ಮತ್ತು ನಾನು ಈ ರೀತಿ ’ಆಟವಾಡಿಸುತ್ತಿದ್ದೇನೆ’ ಎಂದು ಅವಳಿಗೆ ಗೊತ್ತಿರಲಿಲ್ಲ.

ನೀವು ಅಂಗನವಾಡಿಯಲ್ಲಿ ಟೀಚರಾ? ಎಂಬ ಪ್ರಶ್ನೆಯೊಂದಿಗೆ ಮಾತು ಶುರುಮಾಡಿ, ಹುಡುಗಿಯರನ್ನು ಮರಳು ಮಾಡಿ ಬುಟ್ಟಿಗೆ ಹಾಕಿಕೊಂಡು ಮದುವೆಯಾಗುವುದಾಗಿ ನಂಬಿಸಿ ನಂತರ ಸೈನೈಡ್ ಕೊಟ್ಟು ಬರ್ಬರವಾಗಿ ಕೊಲೆ ಮಾಡುತ್ತಿದ್ದ ಮೋಹನ್ ಕುಮಾರ್‌ನ ವಿದ್ಯೆಗೂ, ಈ ತಂತ್ರಕ್ಕೂ ಏನಾದರೂ ವ್ಯತ್ಯಾಸವಿದೆಯಾ? ಅದರೂ ನಮ್ಮ ಹುಡುಗಿಯರು ಬುದ್ದಿ ಕಲಿತಿಲ್ಲ! ಸಮಾಜ, ಮಾಧ್ಯಮಗಳಿಗೆ ಮತ್ತು ಪೊಲೀಸರಿಗೆ ಶಾಪ ಹಾಕುವುದನ್ನು ಬಿಟ್ಟಿಲ್ಲ!

ಮೇಲೆ ನಾ ಹೇಳಿದ ರೀತಿಯ ಮೊಬೈಲ್ ಚ್ಯಾಟ್‌ಗಳು ಸಾಮಾನ್ಯವಾಗಿ ನಡೆಯುತ್ತದೆ. ಅದರೆ ಅದು ಒಂದು ಮಿತಿಯನ್ನು ದಾಟಿದರೆ ಮೋಹನ್ ಕುಮಾರ್ ನಂತವರು ಹುಟ್ಟಿಕೊಳ್ಳುತ್ತಾರೆ.

ಮೋಹನ್ ಕುಮಾರ್‌ನ ಪಾಶವೀ ಕೃತ್ಯ ಬೆಳಕಿಗೆ ಬರುತ್ತಲೇ ಆತನ ಪ್ರತಿ ಚಲನವಲನಗಳ ಬಗ್ಗೆ ಮಾಧ್ಯಮಗಳು ಬೆಳಕು ಚೆಲ್ಲಿದವು. ಈ ನಡುವೆ ’ಲವ್ ಜಿಹಾದ್’ ಎಂಬ ಪಿಡುಗಿನ ಬಗೆಯೂ ಮಾಧ್ಯಮಗಳಲ್ಲಿ ಸಾಕಷ್ಟು ಚರ್ಚೆಗಳಾಗಿವೆ. ನೂರಾರು ಯುವತಿಯರು ’ಲವ್ ಜಿಹಾದ್’ಗೆ ಈಡಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಪ್ರೀತಿಯ ನಾಟಕವಾಡಿ ಹುಡುಗಿಯರನ್ನು ವೇಶ್ಯಾವಟಿಕೆಗೆ ತಳ್ಳಿದ ಸಾಕಷ್ಟು ಪ್ರಕರಣಗಳು ಮಾಧ್ಯಮಗಳಲ್ಲಿ ವರದಿಯಾಗಿವೆ. ಇಷ್ಟೆಲ್ಲಾ ಅಗಬಾರದ ಅನಾಹುತಗಳಾಗುತ್ತಿದ್ದರೂ ಹುಡುಗಿಯರ ನಾಪತ್ತೆ ಮತ್ತು ಪರಾರಿ ಪ್ರಕರಣಗಳು ಮುಂದುವರಿಯುತ್ತಲೇ ಇದೆ.

ಎಲ್ಲರಿಗೂ ಗೊತ್ತಿರುವಂತೆ ಮಾಧ್ಯಮಗಳ ಮುಖ್ಯ ಜವಾಬ್ದಾರಿ ಜನರಿಗೆ ಮಾಹಿತಿ, ಶಿಕ್ಷಣ ಮತ್ತು ಮನರಂಜನೆ ನೀಡುವುದು. ಅದರಲ್ಲೂ ಮಾಧ್ಯಮಗಳು ಮಾಹಿತಿ ಮತ್ತು ಶಿಕ್ಷಣ ನೀಡಿದಾಗ ಜನರಲ್ಲಿ ’ಜಾಗ್ರತಿ’ ಮೂಡುತ್ತದೆ. ಈ ’ಜಾಗ್ರತಿ’ಯಿಂದ ಜನರು ಸಮಾಜದಲ್ಲಿ ಅಥವಾ ವ್ಯವಸ್ಥೆಯಲ್ಲಿ ಬದಲಾವಣೆ ತರಲು ಶ್ರಮಿಸುತ್ತಾರೆ. ಅದ್ದರಿಂದ ಮಾಧ್ಯಮಗಳಿಗೆ ಸಮಾಜದಲ್ಲಿ ಅತ್ಯಂತ ಗೌರವಯುತ ಮತ್ತು ಜವಾಬ್ದಾರಿಯುತ ಸ್ಥಾನ.

ಮಾಧ್ಯಮಗಳು ಬಹುಪಾಲು ಸಂದರ್ಭದಲ್ಲಿ ಈ ಕೆಲಸವನ್ನು ನಿಷ್ಠೆಯಿಂದ ಮಾಡಿಕೊಂಡು ಬಂದಿವೆ. ಕೆಲ ಸಂದರ್ಭಗಳಲ್ಲಿ ಮತ್ತು ಕೆಲ ಮಾಧ್ಯಮಗಳಲ್ಲಿ ಸ್ವಲ್ಪ ಹೆಚ್ಚು ಕಡಿಮೆ, ವೈಭವೀಕರಣ, ನಿರ್ಲಕ್ಷ್ಯ ಮತ್ತು ತಮ್ಮ ’ಇಸಂ’ಗಳ ಮಿಶ್ರಣದಿಂದ ಪತ್ರಿಕಾಧರ್ಮಕ್ಕೆ ಚ್ಯುತಿಯಾಗಿರಬಹುದು. ಅದನ್ನು ಹೊರತು ಪಡಿಸಿ ಮತ್ತು ಕೆಲ ಬಾಲ ಬಡುಕ ಮತ್ತು ಪಕ್ಷ ನಿಷ್ಠ, ಮತ್ತು ವ್ಯಕ್ತಿ ನಿಷ್ಠ ಮಾಧ್ಯಮಗಳನ್ನು ಬದಿಗಿಟ್ಟು ನೋಡಿದರೆ ಇಂದಿಗೂ ಮಾಧ್ಯಮಗಳು ತಮ್ಮ ಮೂಲ ಆಶಯವನ್ನು ಮರೆಯದೆ ಜನರಲ್ಲಿ ಜಾಗ್ರತಿ ಮೂಡಿಸುವ ಕಾರ್ಯನಿರ್ವಹಿಸುತ್ತಿವೆ. ಆದರೆ ಸಮಾಜ ತಾನು ಜಾಗ್ರತ ಗೊಳ್ಳುವುದಿಲ್ಲ ಎಂದು ಪ್ರತಿಜ್ಞೆ ಮಾಡಿ ಬಿದ್ದು ಕೊಂಡರೆ ಅದಕ್ಕೆ ಯಾರು ಹೊಣೆ?

ಮೋಹನ್ ಕುಮಾರ್‌ನ ಪ್ರಕರಣದ ಎಳೆ ಎಳೆಯನ್ನು ಜನರ ಮುಂದೆ ಬಿಚ್ಚಿಟ್ಟಿದ್ದರೂ ಕೂಡ ಓಡಿ ಸುಸ್ತಾಗುವವರ ಸಂಖ್ಯೆ ಕಡಿಮೆಯಾಗಿಲ್ಲ ಎಂದರೆ ಅದಕ್ಕೆ ಸಮಾಜವೇ ಕಾರಣ ಅಲ್ಲವೇ? ಈ ವಿಷಯದಲ್ಲಿ ಮಾಧ್ಯಮಗಳು ಜನರಲ್ಲಿ ಜಾಗ್ರತಿಯುಂಟು ಮಾಡುವ ಕೆಲಸವನ್ನು ಮಾಡಿದವು. ಅದ್ದರಿಂದ ಇಂದು ಈ ಜಿಲ್ಲೆಯ ಬಹುತೇಕ ಎಲ್ಲರಿಗೂ ಮೋಹನ್ ಕುಮಾರ್‌ನ ಕುಕೃತ್ಯಗಳ ಪರಿಚಯವಿದೆ ಆ ಮೂಲಕ ತಾವೂ ಕೂಡ ಯಾವ ರೀತಿ ಮೋಸದ ಜಾಲಕ್ಕೆ ಸಿಲುಕಬಹುದು ಎಂಬರಿವಿದೆ. ಹಾಗೆಯೇ ತಾವು ಅನೈತಿಕ ದಂಧೆಯ ಪಾಲಾಗಬಹುದು ಎಂಬುದು ಕೂಡ ತಿಳಿದಿದೆ. ಆದರೇನು ಪ್ರಯೋಜನ? ಓಡಿ ಹೋಗುವವರು ನಿಲ್ಲುತ್ತಲೇ ಇಲ್ಲ!

ಜಾಗತಿಕ ತಾಪಮಾನ ಏರಿಕೆಯ ದುಷ್ಪರಿಣಾಮದ ಬಗ್ಗೆ ಮಾಧ್ಯಮಗಳು ಕೆಲ ವರ್ಷಗಳ ಹಿಂದಿನಿಂದಿನಿಂದಲೇ ಜನರಲ್ಲಿ ಜಾಗ್ರತಿಯುಂಟು ಮಾಡುವ ಕೆಲಸ ಮಾಡಿದ್ದವು. ಆದರೆ, ಆ ಬಗ್ಗೆ ಯಾರೂ ಗಂಭೀರವಾಗಿ ಯೋಚಿಸಿರಲಿಲ್ಲ. ಯೋಚಿಸಿದ್ದರೂ ಕೂಡ ಅದನ್ನು ಸಂಘಟಿತರಾಗಿ ಆಡಳಿತರೂಡರ ಗಮನಕ್ಕೆ ತಂದು ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಮಾಡುವಲ್ಲಿ ವಿಫಲರಾಗಿದ್ದರು. ಜಗತ್ತಿನ ತಾಪಮಾನ ಏರುತ್ತಿದೆ ಎಂಬುದಕ್ಕೆ ಸಾಕಷ್ಟು ಆಧಾರಗಳಿದ್ದವು ಮತ್ತು ಅದರಿಂದ ದುಷ್ಪರಿಣಾಮಗಳಾಗುತ್ತವೆ ಎಂಬುದಕ್ಕೆ ವೈಜ್ಞಾನಿಕ ಪುರಾವೆಗಳನ್ನು ವಿಜ್ಞಾನಿಗಳು ಇದೇ ಮಾಧ್ಯಮಗಳ ಮೂಲಕ ಜನರಿಗೆ ನೀಡಿದ್ದರು. ಆದರೆ ಸಮಾಜದ್ದು ಎಂದಿನ ’ಘನ’ ನಿದ್ದೆ. ಆದೇ ಯಾರೋ ಕಿಸಿಬಾಯಿ ದಾಸಯ್ಯ ಡಿಸೆಂಬರ್ ೨೧, ೨೦೧೨ಕ್ಕೆ ಪ್ರಳಯವಾಗುತ್ತದೆ ಎಂದದ್ದೇ ತಡ ಆ ಸುದ್ದಿ ಬೆಳಕಿನ ವೇಗದಲ್ಲಿ ಜನರ ನಡುವೆ ಓಡಾಡಿತ್ತು. ಟಿವಿಯಲ್ಲಿ ಬರುವ ಜ್ಯೋತಿಷಿಗಳು ನಾಯಿ ಮಲ ತಿಂದರೆ ನಿನ್ನ ಸಮಸ್ಯೆ ಪರಿಹಾರವಾಗುತ್ತದೆ ಎಂದರೆ ಅದನ್ನು ತಿನ್ನಲು ತಯಾರಾಗಿರುವವರಿದ್ದಾರೆ. ಆದೇ ಒಬ್ಬ ವಿಜ್ಞಾನಿ ಕುದಿಸಿದ ನೀರು ಕುಡಿಯಿರಿ ಎಂದರೆ ನಮಗೆ ಒಗ್ಗಿ ಬರುವುದಿಲ್ಲ. ಇಂದಿಗೂ ಮೂಢ ನಂಬಿಕೆಗಳಿಂದ ಹೊರಬರಲು ಸಾಧ್ಯವಾಗದ ಸಮಾಜದ ಮಧ್ಯೆ ವ್ಯೆಜ್ಞಾನಿಕ ಮನೋಭಾವ ಬಿತ್ತುವುದು ಅದೇಷ್ಟು ಕಷ್ಟ. ಈ ಮಿತಿಯಲ್ಲೂ ಮಾಧ್ಯಮಗಳು ವೈಜ್ಞಾನಿಕ ಮಾಹಿತಿ ಕೊಡುವಲ್ಲಿ ಶ್ರಮಿಸಿವೆ. ಆದರೆಡೆಯಲ್ಲಿ ಕೆಲವರು ಮೂಡನಂಬಿಕೆಗಳನ್ನು ಮಾರ್ಕೆಟ್ ಮಾಡುವ ಕೆಲಸ ಮಾಡಿರಬಹುದು. ಆದರೂ ಅವರು ಜಾಗತಿಕ ತಾಪಮಾನದ ಬಗ್ಗೆ ಈ ಮೊದಲು ಉಲ್ಲೇಖ ಮಾಡಿದ್ದರು.

ಮಾಧ್ಯಮಗಳಿಗೆ ರೈತರ ಅತ್ಮಹತ್ಯೆಗಳಿಗಿಂತ ಫ್ಯಾಶನ್ ಶೋಗಳು, ಸೆಲೆಬ್ರಿಟಿಗಳು ಮುಖ್ಯವಾಗಿದ್ದಾರೆ, ಮುಖ್ಯವಾಗುತ್ತಿದ್ದಾರೆ, ಈ ಮಾಧ್ಯಮಗಳು ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಎಂದು ಹುಯಿಲೆಬ್ಬಿಸುವ ಕೆಲಸ ಒಂದು ಕಡೆ ನಡೆಯುತ್ತಿದೆ. ಹೌದು, ಮಾಧ್ಯಮಗಳು ರೈತನ ಅತ್ಮಹತ್ಯೆಗೆ ಎಲ್ಲೋ ಒಂದು ಮೂಲೆಯಲ್ಲಿ ಸ್ಥಾನ ಕೊಟ್ಟಿರಬಹುದು. ಆದರೆ ಇಂದು ದೇಶದ ಬಹುತೇಕ ವಿದ್ಯಾವಂತ ಜನರಿಗೆ ರೈತರು ಅತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂಬರಿವು ಮಾಧ್ಯಮಗಳಿಂದ ದಕ್ಕಿದೆ. ಆದರೆ, ಎಷ್ಟು ಮಂದಿ ರ‍್ಯೆತರ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದಾರೆ?

ಜನರಿಗೆ ವರ್ಷಕ್ಕೆ ಸಾವಿರಾರು ರೈತರು ಅತ್ಮಹತ್ಯೆ ಮಾಡಿಕೊಳ್ಳುವಂತದ್ದು ಒಂದು ಸಾಮಾನ್ಯ ಸುದ್ದಿಯಾಗಿಯೇ ಉಳಿಯುವುದಾದರೆ, ಅದಕ್ಕೆ ಸ್ಪಂದಿಸುವ ಮನಸ್ಸಿಲ್ಲ ಎಂದಾದರೆ ಆ ಜಾಗವನ್ನು ಸೆಲೆಬ್ರಿಟಿಗಳ ಸುದ್ದಿ ಅಲಂಕರಿಸುವುದರಲ್ಲಿ ತಪ್ಪೇನಿದೆ?

ಇವತ್ತು ರೈತರ ಸಮಸ್ಯೆಗಳ ಅರಿವು ಇರುವವರು ಎಂದೆನಿಸಿಕೊಂಡವರು ಕೂಡ ಸಂತೆಗೆ ಹೋಗಿ 1 ರೂಪಾಯಿಗೆ 2 ಕೆಜಿ ಟೊಮೆಟೊ ಕೊಡು ಅನ್ನುತ್ತಾರೆ. ಅದೇ ಮಾಲ್‌ಗಳಿಗೆ ಹೋಗಿ ಅದೇ ಟೊಮೆಟೊಕ್ಕೆ ಕೆಜಿಗೆ ೩೦ ರೂಪಾಯಿ ಅಂದರೂ ತುಟಿ ಬಿಚ್ಚದೇ ನೋಟು ಬಿಚ್ಚುತ್ತಾನೆ. ಈಗ ಹೇಳಿ, ತಮ್ಮ ಜವಾಬ್ದಾರಿ ಮರೆತಿರುವುದು ಮಾಧ್ಯಮಗಳಾ? ಅಥವಾ ಸಮಾಜವಾ?

ಇಂದು ದೇಶದ ಬಹುತೇಕ ಎಲ್ಲ ಕೃಷಿಕರು ಒಂದಲ್ಲ ಒಂದು ಸಮಸ್ಯೆ ಎದುರಿಸುತ್ತಿದ್ದಾರೆ. ಇದನ್ನು ಮಾಧ್ಯಮಗಳು ವ್ಯವಸ್ಥೆಯ ಗಮನಕ್ಕೆ ತಂದಿವೆ. ಆದರೆ ಎಲ್ಲೂ ಎಲ್ಲ ಕೃಷಿಕರನ್ನು ಒಂದೇ ಸೂರಿನಡಿಗೆ ತಂದು ಒಂದು ಹೋರಾಟ ಸಂಘಟಿಸಲು ಸಾಧ್ಯವಾಗಿಲ್ಲ, ಯಾಕೆ? ಜನರನ್ನು ಧರ್ಮದ ಹೆಸರಲ್ಲಿ, ಜಾತಿಯ ಹೆಸರಲ್ಲಿ, ಭಾಷೆಯ ಹೆಸರಲ್ಲಿ ಸಂಘಟಿಸಿ ಆಧಿಕಾರದ ರುಚಿ ಸವಿದವರಿದ್ದಾರೆ, ರೈತರ ಹೆಸರು ಹೇಳಿ ಅಧಿಕಾರದ ದಿಬ್ಬಣ ಏರಿದ ಹೆಗ್ಗಣಗಳ ಸಂಖ್ಯೆಗೂ ಮಿತಿಯಿಲ್ಲ. ಅದರೂ ಇಂದಿಗೂ ರೈತ ಅನಾಥ. ಈ ಬಗ್ಗೆ ಮಾಧ್ಯಮಗಳು ’ಜಾಗೃತಿ’ಯುಂಟು ಮಾಡುವ ಕೆಲಸ ಮಾಡಿಲ್ಲವೇ?

ಶೋಷಣೆ, ಭ್ರಷ್ಟಾಚಾರ, ಲಂಚಕೋರತನ, ದುಷ್ಟ ರಾಜಕೀಯದ ಬಗ್ಗೆ ಸಿನಿಮಾ ಸೇರಿದಂತೆ ಎಲ್ಲ ಮಾಧ್ಯಮಗಳು ಜನರೇ ಜಾಗ್ರತರಾಗಿ, ಈ ದುಷ್ಟಕೂಟದಿಂದ ಯಾವ ರೀತಿ ಹೊರಬರಬಹುದು ಎಂದು ಬಾಯಿ ಬಾಯಿ ಬಡಿದುಕೊಂಡಿವೆ ಅದರೂ ಈ ಪಿಡುಗು ಕಿಂಚಿತ್ ಕಡಿಮೆಯಾಗಿಲ್ಲ. ಹೋಗಲಿ, ನಮ್ಮ ಲೋಕಾಯುಕ್ತವಂತೂ ಭ್ರಷ್ಟ ಖದೀಮರ ವಿರುದ್ದ ಸಾರಿರುವ ಸಮರಕ್ಕೆ ಎಲ್ಲ ಮಾಧ್ಯಮಗಳು ತುಂಬು ಪ್ರಚಾರ ನೀಡುತ್ತಿವೆ. ಆದರೂ ಜನ ತಮ್ಮ ಕೆಲಸ ಮಾಡಿ ಕೊಡಲು ಅಧಿಕಾರಿಗಳಿಗೆ ಹಣ ಕೊಡುವುದನ್ನು ನಿಲ್ಲಿಸಿಲ್ಲ. ಹಣ ಕೇಳುವ ಅಧಿಕಾರಿಗಳ ವಿರುದ್ದ ದೂರು ಕೂಡ ಕೊಡುತ್ತಿಲ್ಲ. ಕೊಟ್ಟರು ಅಂಥವರ ಪ್ರಮಾಣ ತೀರಾ ಕಡಿಮೆ. ಎಲ್ಲವನ್ನೂ ಮಾಧ್ಯಮಗಳ ತನಿಖಾ ವರದಿ ಅಥವಾ ಕುಟುಕು ಕಾರ್ಯಾಚರಣೆಯೇ ಮಾಡಲಿ, ಇಂತಹ ಪಿಡುಗುಗಳ ವಿರುದ್ದ ಹೋರಾಡುವುದು, ಸಮಾಜದಲ್ಲಿ ಬದಲಾವಣೆ ತರುವುದು ಮಾಧ್ಯಮಗಳಿಗೆ ಮಾತ್ರ ಸೀಮಿತವಾದ ಕರ್ತವ್ಯ ಮತ್ತು ಜವಾಬ್ದಾರಿ ಎಂಬ ಮನೋಭಾವ ಸಮಾಜದಲ್ಲಿ ಈಗಾಗಲೇ ಬಲವಾಗಿ ಬೇರುಬಿಟ್ಟಿದೆ.

ಇದು ಮಾಧ್ಯಮಗಳ ಮಹಿಮೆ, ಸಾಮರ್ಥ್ಯ, ಮತ್ತು ಶಕ್ತಿಯನ್ನು ಪರಿಗಣಿಸಿ ಸಮಾಜ ನೀಡಿದ ಗೌರವ ಎಂದು ಭಾವಿಸುವ ಸಂಗತಿಯಾಗಿ ಉಳಿದಿದ್ದರೆ ಖಂಡಿತವಾಗಿ ಮಾಧ್ಯಮಗಳಲ್ಲಿ ಕಾರ್ಯನಿರ್ವಹಿಸುತ್ತಿರುವವರೆಲ್ಲರೂ ಬಹು ಹೆಮ್ಮ ಪಡಬೇಕಾದ ವಿಷಯವಾಗಿರುತ್ತಿತ್ತು. ಅಥವಾ ಮಾಧ್ಯಮಗಳಲ್ಲಿ ಪ್ರಕಟವಾದರೆ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ ಹಾಗೂ ವ್ಯವಸ್ಥೆ ಮತ್ತು ಸಮಾಜ ಅದಕ್ಕೆ ಸ್ಪಂದಿಸುತ್ತದೆ ಎಂಬ ವಿಶ್ವಾಸ ಇದರ ಹಿಂದೆ ಇದ್ದಿದ್ದರೂ ಕೂಡ ಅದು ಮಾಧ್ಯಮಗಳ ಹಿರಿಮೆಯೆನಿಸುತ್ತಿತ್ತು. ಆದರೆ ದುರದೃಷ್ಟವಶಾತ್ ಇಂದಿನ ಮಾಧ್ಯಮಗಳ ಮೇಲಿನ ಸಮಾಜದ ನಿರೀಕ್ಷೆಯ ಹಿಂದಿರುವುದು ಅದರ ಪಲಾಯಾನವಾದ.

ಸ್ವಾತಂತ್ರ್ಯಪೂರ್ವದಲ್ಲಿ ಆದರ್ಶ ಪತ್ರಿಕೋದ್ಯಮವಿತ್ತು ಈಗ ಇಲ್ಲ ಎಂದು ಕನವರಿಸುವವರು ಆಗೀನ ಸಮಾಜ ಹೇಗಿತ್ತು? ಅದು ಸಮಸ್ಯೆಗಳಿಗೆ, ಹೋರಾಟಗಳಿಗೆ ಯಾವ ರೀತಿ ಸ್ಪಂದಿಸುತ್ತಿತ್ತು ಎಂಬುದನ್ನು ಮೊದಲು ಗಮನಿಸಬೇಕು. ಅಂದು ಒಂದು ಸಮಸ್ಯೆಯ ಬಗ್ಗೆ ಬರೆದರೆ ಅದರ ಬಗ್ಗೆ ಯೋಚಿಸುವ ಸಮಾಜವಿತ್ತು, ಅಗತ್ಯಬಿದ್ದರೆ ಮನೆ ಮಠ ಬಿಟ್ಟು ಕೂಡ ಹೋರಾಡುತ್ತಿದ್ದರು. ಅದ್ದರಿಂದ ಸಮಸ್ಯೆ ಪರಿಹಾರವಾಗುತ್ತಿತ್ತು.

ನೆನಪಿಡಿ, ಆಗ ಇದ್ದದ್ದು ಈಗೀನ ಅಕ್ಷರಸ್ಥರ ಪ್ರಮಾಣದ ಆರ್ಧಕ್ಕಿಂತಲೂ ಕಡಿಮೆ ಅಕ್ಷರಸ್ಥರು. ಮಾಧ್ಯಮ ಎಂದರೆ ಪತ್ರಿಕೆ ಮಾತ್ರ. ರೇಡಿಯೋ ತನ್ನ ಅಸ್ತಿತ್ವ ಕಂಡುಕೊಂಡದ್ದು 1935ರ ಬಳಿಕ. ಸಂಪರ್ಕ ಸಾಧನಗಳಾಗಲೀ, ರಸ್ತೆಗಳಾಗಲೀ ತೀರಾ ಬಾಲಾವಸ್ಥೆಯಲ್ಲಿತ್ತು. ಆದರೂ ಅವರು ಹೋರಾಡಿದರು ಮತ್ತು ಗೆದ್ದರು.

ಆದೇ ಈಗ? ಕ್ಷಣ ಮಾತ್ರದಲ್ಲಿ ಜಗತ್ತಿನ ಯಾವುದೇ ಪ್ರದೇಶಕ್ಕೆ ಸಂಪರ್ಕ ಸಾಧಿಸಬಲ್ಲೇವು, ಟಿವಿ, ಇಂಟರ್ನೆಟ್‌ಗಳು ರೇಡಿಯೋ ಮತ್ತು ಪತ್ರಿಕೆಗಳ ಜೊತೆ ಸೇರಿ ಮಾಧ್ಯಮ ಕ್ರಾಂತಿಯೇ ಆಗಿದೆ. ಈ ಕ್ರಾಂತಿ ಸಮಾಜದ ಕಟ್ಟ ಕಡೆಯ ವ್ಯಕ್ತಿಯನ್ನು ಕೂಡ ತಲುಪಿದೆ. ಆದರೂ ಈ ಸಮಾಜಕ್ಕೆ ತನ್ನೋಳಗೊಂದು ವ್ಯವಸ್ಥಿತ ಬದಲಾವಣೆ ತರಲು ಸಾಧ್ಯವಾಗುತ್ತಿಲ್ಲ.

ಮಾಧ್ಯಮಗಳು ತಮ್ಮ ಮೂಲ ಉದ್ದೇಶಗಳಿಗೆ ನಿಷ್ಠವಾಗಿಯೇ ಇವೆ ಎಂದು ಹೇಳುವುದು ಕಷ್ಟ ಆದರೂ ತಮ್ಮ ಉದ್ದೇಶ ಮರೆತಿಲ್ಲ. ಆದರೆ ಸಮಾಜ ಮಾತ್ರ ಎಲ್ಲವನ್ನೂ ಮಾಧ್ಯಮಗಳ ಮೇಲೆ ಹೊರಿಸಿ ತಾನು ಮಾತ್ರ ನಿಶ್ಚಿಂತವಾಗಿದೆ.

ರಸ್ತೆ ಸರಿಯಿಲ್ಲ ಎಂದು ಪತ್ರಕರ್ತ ಬರೆಯಬಹುದು ಮತ್ತು ಬರೆಯುತ್ತಾನೆ, ಆದರೆ ಅದನ್ನು ಅವನೇ ರಿಪೇರಿ ಮಾಡಿಸಿಕೊಡಬೇಕು ಎಂದು ಬಯಸಲು ಸಾಧ್ಯವಿಲ್ಲ ಇದು ಎಲ್ಲ ವಿಷಯಗಳಿಗೂ ಅನ್ವಯಿಸುತ್ತದೆ. ಯಾಕೆಂದರೆ ಅವನಿಗೆ ಸಾಂವಿಧಾನಿಕವಾದ ಯಾವುದೇ ವಿಶೇಷ ಹಕ್ಕಿಲ್ಲ, ಒಬ್ಬ ಜನ ಸಾಮಾನ್ಯನಿಗೆ ಇರುವ ಎಲ್ಲ ನೀತಿ ನಿಯಮಗಳು ಅವನಿಗೂ ಅನ್ವಯಿಸುತ್ತದೆ ಹಾಗೂ ಅವನು ಅದಕ್ಕೆ ಬದ್ದನಾಗಿರಬೇಕು. ಹಾಗೆಯೇ ಸಮಾಜದ ಉಳಿದವರಿಗೆ ಇರುವಂತಹ ಎಲ್ಲ ಸಂಬಂಧಗಳು, ಇತಿ ಮಿತಿಗಳು ಅವನಿಗೂ ಇರುತ್ತದೆ ಎಂಬುದನ್ನು ಮರೆಯಬಾರದು ಅಲ್ಲವೇ?
READ MORE - ಎಲ್ಲ ಜವಾಬ್ದಾರಿಗಳು ಪತ್ರಕರ್ತನದ್ದೇಯಲ್ಲ !

ಗ್ರಾಮೀಣ ವರದಿಗಾರಿಕೆ ಏನಾಗಿದೆ ?

Thursday, February 11, 2010


ಪತ್ರಕರ್ತ ಚೀ. ಜ. ರಾಜೀವ ಅವರು ಗ್ರಾಮೀಣ ವರದಿಗಾರಿಕೆ ಕುರಿತ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇಲ್ಲಿಯ ಲೇಖನಗಳನ್ನು ಆಧರಿಸಿ ಚರ್ಚೆಯನ್ನೂ ಬೆಳೆಸುವವರು ಲೇಖನಗಳನ್ಳು ಕಳುಹಿಸಿ.


ಇದು ಎಂಟು ವರ್ಷಗಳ ಹಿಂದಿನ ಮಾತು. ಪತ್ರಿಕೆಯ ಡೆಸ್ಕ್‌ನಲ್ಲಿ ಕೆಲಸ ಮಾಡುತ್ತಿದ್ದೆ. ಮೊಬೈಲ್ ಬಳಕೆ ಇನ್ನೂ ಸಾರ್ವತ್ರೀಕರಣಗೊಂಡಿರಲಿಲ್ಲ. ಚಾಮರಾಜನಗರ ಜಿಲ್ಲೆಯ ಪುಟ ವಿನ್ಯಾಸದ ಜವಾಬ್ದಾರಿ ಹೊತ್ತಿದ್ದೆ. ಮಧ್ಯಾಹ್ನ ಕಚೇರಿಗೆ ಬಂದ ತಕ್ಷಣ, ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲದ ನಮ್ಮ ಪತ್ರಿಕಾ ಏಜೆಂಟ್ ಮಲ್ಲೇಶ್ ಅವರ ದೂರವಾಣಿ ಕರೆ ನನ್ನನ್ನು ಅರಸಿ ಬಂತು. ಏನು ವಿಷಯ ಎಂದು ರಿಸೀವರ್ ಎತ್ತುಕೊಳ್ಳುತ್ತಿದ್ದಂತೆಯೇ, ‘ಏನ್ ಗುರು, ನೀನು ತಾಲೂಕು ಪಂಚಾಯಿತಿ ಅಧ್ಯಕ್ಷರ ಫೋಟೊನ ಹಾಕಿಬಿಟ್ಟಿದ್ದೀಯ. ಅದು ಅಲ್ಲದೆ, ಅವನ ಹೆಸರು ಹೆಡ್‌ಲೈನ್‌ನಲ್ಲಿ ಬೇರೆ ಇದೆ. ನಮ್ದೇನು ಲೋಕಲ್ ಪತ್ರಿಕೆ ಅನ್ಕೊಂಡು ಬಿಟ್ಟಿದ್ದೀಯ. ಅವ್ರೆ(ಸ್ಥಳೀಯ ಪತ್ರಿಕೆ) ಜಿಲ್ಲಾ ಪಂಚಾಯಿತಿ ಮೆಂಬರ್‌ದು ಫೋಟೊ ಹಾಕೋದಿಲ್ಲ...’ ಎನ್ನುತ್ತಾ ಹೋದರು. ಏನೋ ಎಡವಟ್ಟಾಗಿದೆ ಅನಿಸಿತು. ಯಾವುದೇ ಲೋಕಲ್ ಪತ್ರಿಕೆಯಲ್ಲಿ ಕೆಲಸ ಮಾಡಿದ ಅನುಭವ ನನಗಿರಲಿಲ್ಲ. ಅದೂ ಅಲ್ಲದೆ, ವೃತ್ತಿಗೆ ಸೇರಿದ ಮೊದಲ ಒಂದುವರೆ ವರ್ಷ ರಿಪೋರ್ಟಿಂಗ್ ಮಾಡಿ ಅನುಭವವಿದ್ದ ನನಗೆ, ಡೆಸ್ಕ್ ತೀರ ಹೊಸದಾಗಿತ್ತು. ಹಾಗಾಗಿ, ನಾನೇನೋ ತಪ್ಪು ಮಾಡಿರಬಹುದು ಎಂದು ಅನಿಸಲಾರಂಭಿಸಿತು.

ತಾಲೂಕು ಪಂಚಾಯಿತಿ ಸದಸ್ಯರ ಫೋಟೊ ಮತ್ತು ಅವರ ಹೆಸರು ಹೆಡ್‌ಲೈನ್‌ನಲ್ಲಿ ಬರುವುದು ಸಲ್ಲದು ಎಂಬ ಮನಸ್ಥಿತಿಯ ಜೀವಂತವಾಗಿದ್ದ ಕಾಲವನ್ನು ಪತ್ರಿಕೋದ್ಯಮದಲ್ಲಿ ನೋಡಿ ಬೆಳೆದವನು ನಾನು.

ಗ್ರಾಮೀಣ ವರದಿಗಾರಿಕೆ ಕುರಿತು ಲೇಖನ ಬರೆಯಲು ಹೊರಟಾಗ ಬೇಡವೆಂದರೂ, ಮೇಲಿನ ಘಟನೆ ನೆನಪಾಯಿತು. ತಾಲೂಕು ಪಂಚಾಯಿತಿ ಸದಸ್ಯನ ರಾಜಕೀಯ ಹಾಗೂ ಅಭಿವೃದ್ಧಿ ಚಟುವಟಿಕೆಯನ್ನು ಅವರ ಫೋಟೊ ಸಹಿತ ಹಾಕಬಾರದು. ಅದು ಪತ್ರಿಕೆಯೊಂದರ ಘನತೆಗೆ- ಅಂತಸ್ತಿಗೆ(?) ತಕ್ಕನಾದುದಲ್ಲ ಎಂದು ಭಾವಿಸಿದವರು ನಮ್ಮ ನಡುವೆ ಇನ್ನೂ ಇದ್ದಾರೆ.

ಇಂಥವರು ತೀರ ಇತ್ತೀಚಿನವರೆಗೂ ನಂಬಿದ್ದ ಪತ್ರಿಕಾ ವ್ಯಾಕರಣದ ಪ್ರಕಾರ- ವರದಿಗಾರಿಕೆ ಅಂದ್ರೆ ಶಾಸಕರು ಮತ್ತು ಅವರಿಗಿಂತ ಮೇಲ್ಪಟ್ಟುವರು ಮಾಡುವ ರಾಜಕೀಯವನ್ನು ಮೊದಲ ಪುಟದಲ್ಲಿ ಬರೆಯುವುದು, ಕ್ರೀಡೆಗೆ ಕೊನೆ ಪುಟ, ನಡುವೆ ಒಂದಿಷ್ಟು ಸಂಪಾದಕೀಯ, ವಾಣಿಜ್ಯ-ಪಾಣಿಜ್ಯ. ಉಳಿದಂತೆ ಭಾನುವಾರದ ಪುರವಣಿ ನಾಡಿನ ಸಮಸ್ತ ಸಾಹಿತಿಗಳಿಗೆ ಮೀಸಲಾಗಿರಬೇಕು. ಈ ಚೌಕಟ್ಟನ್ನು ಉಲ್ಲಂಘಿಸಿದರೆ, ಪತ್ರಿಕೆಗಳು ಕೆಟ್ಟಿವೆ ಇಲ್ಲವೇ ಕೆಡಲಾರಂಭಿಸಿವೆ ಎಂದೇ ಅರ್ಥ.

ಇಂಥವರ ದೃಷ್ಟಿಯಲ್ಲಿ ಗ್ರಾಮೀಣ ವರದಿಗಾರಿಕೆ ಅಂದ್ರೆ ಏನು ?- ಹಳ್ಳಿಯ ಜಾತ್ರೆ, ಅಲ್ಲಿನ ವಿಶೇಷ ಜನಪದ, ರೈತರ ಆತ್ಮಹತ್ಯೆ, ಹಳ್ಳಿಯಲ್ಲಿ ನಡೆಯುವ ಜಾತಿ, ಕೋಮು ಸಂಘರ್ಷ.... ಹೀಗೆ ಕೆಲವು ಆಯ್ದ ಸೆನ್ಸೇಷನಲ್ ಸಂಗತಿಗಳ ಕುರಿತು ವಾರಕ್ಕೆ ಇಲ್ಲವೇ ಪಾಕ್ಷಿಕವಾಗಿ ಒಂದೆರೆಡು ಕಾಲಂ ಸುದ್ದಿ ಬರೆಯುವುದಷ್ಟೇ.

ಗ್ರಾಮೀಣ ಬದುಕಿಗೆ ಸಂಬಂಧಿಸಿದ ಇಂಥ ವರದಿಗಳು ಮೊದಲಿಂದಲೂ ಪತ್ರಿಕೆಯಲ್ಲಿ ಸ್ಥಾನ ಪಡೆಯುತ್ತಲೆ ಇವೆ. (೨೫-೩೦ ವರ್ಷಗಳ ಹಿಂದಿನ ಮಹತ್ವದ ಕಿರು ಸುದ್ದಿಯನ್ನು ಪ್ರಕಟಿಸುವ ಪ್ರಜಾವಾಣಿ, ಸಂಯುಕ್ತ ಕರ್ನಾಟಕದಲ್ಲಿ ಇಂಥ
ಸುದ್ದಿಗಳನ್ನು ವಿರಳವಾಗಿ ನೋಡಬಹುದು)

ಆದರೆ, ಇದನ್ನೂ ಒಂದು ಮುಖ್ಯವಾಹಿನಿ ಪತ್ರಿಕೋದ್ಯಮದಲ್ಲಿ ವಿಶೇಷವಾದ ಪ್ರಕಾರ(ರಾಜಕೀಯ, ಸಾಹಿತ್ಯ, ವಾಣಿಜ್ಯ, ಕ್ರೀಡೆ, ಸಿನಿಮಾ, ಜಲ...)ವಾಗಿ ಪರಿಗಣಿಸಿ, ಅಲ್ಲಿ ವಿಶೇಷವಾಗಿ ಒಂದಿಷ್ಟು ಪತ್ರಿಕಾ ಕೃಷಿ ಮಾಡಬೇಕು ಎಂದು ಯಾರಿಗೂ ಅನಿಸಿರಲಿಲ್ಲ.

ಈ ನಡುವೆ, ದಶಕಗಳಿಂದೀಚೆಗೆ ಮುಖ್ಯವಾಹಿನಿಯ ಎಲ್ಲಪತ್ರಿಕೆಗಳು ಕೃಷಿ ಪುರವಣಿಗಳನ್ನು ತರಲಾರಂಭಿಸಿದವು. ಆದರೆ, ದಿನಗಳು ಕಳೆದಂತೆ ಪುರವಣಿಯ ಸಂಖ್ಯೆ ಕಡಿಮೆಯಾಗುತ್ತಾ ಬಂತು. ಆಕಾಶವಾಣಿಯ ರೈತರಿಗೆ ಸಲಹೆ ಮಾದರಿಯಲ್ಲಿಯೇ ಕೃಷಿಯ ಬಗ್ಗೆ ಒಂದಿಷ್ಟು ಮಾಹಿತಿ ನೀಡುವು ಇಲ್ಲವೇ ಅದಕ್ಕಿಂತ ಸ್ವಲ್ಪ ಹೆಚ್ಚು- ಎನಿಸುವ ಒಂದಿಷ್ಟು ಕೆಲಸ ಕೃಷಿ ಪುರವಣಿಗಳಿಂದ ಆಗುತ್ತಿದೆ.

ಆದರೆ, ಇತ್ತೀಚೆಗೆ ಕೆಲವರು ಗ್ರಾಮೀಣ ವರದಿಗಾರಿಕೆ ಪ್ರಾಕಾರವನ್ನು ಜನಪ್ರಿಯಗೊಳಿಸಬೇಕು ಎಂದು ನಿರ್ಧರಿಸಿರುವುದು ನಿಜಕ್ಕೂ ಸ್ವಾಗತಾರ್ಹ.
ಪತ್ರಿಕೆಗಳು ಗ್ರಾಮೀಣ ಪ್ರದೇಶದಲ್ಲಿಯೂ ತಮ್ಮ ಪ್ರಸಾರ ಸಂಖ್ಯೆಯನ್ನು ವೃದ್ಧಿಸಿಕೊಳ್ಳುತ್ತಿರುವುದರಿಂದ ಉಂಟಾಗಿರುವ ಅನಿವಾರ್ಯತೆಯೋ ಅಥವಾ ನಿಜಕ್ಕೂ ಈ ಬಗ್ಗೆ ಕೃಷಿ ನಡೆಯಬೇಕು ಎಂಬ ತುಡಿತವೋ- ಕಾರಣ ಏನೇ ಇರಲಿ, ಇಂಥದ್ದೊಂದು ಬೆಳವಣಿಗೆ ಈ ಹೊತ್ತಿಗೆ ಬೇಕಿತ್ತು.

ಏಕೆಂದರೆ- ಅಭಿವೃದ್ದಿಯ ಮೀಮಾಂಸೆಯನ್ನೇ ನಮ್ಮನ್ನು ಆಳುವವರು ಬದಲಿಸುತ್ತಿದ್ದಾರೆ. ಮುಂದಿನ ೨೦ ವರ್ಷಗಳ ಬಳಿಕ ದೇಶದ ಜನಸಂಖ್ಯೆಯ ಅರ್ಧದಷ್ಟು ಜನ ನಮ್ಮ ನಗರ ಪ್ರದೇಶದಲ್ಲಿ ಇರುತ್ತಾರೆ. ಹಾಗಾಗಿ, ನಗರಗಳನ್ನು ಹೆಚ್ಚು ಮಾಡಿ ಎಂದು ಕೇಂದ್ರ ಸರಕಾರ ಜವಹರ್‌ಲಾಲ್ ನೆಹರು ರಾಷ್ಟ್ರೀಯ ನಗರ ಪುನರುಜ್ಜೀವನ ಯೋಜನೆಯನ್ನು ಜಾರಿಗೆ ತಂದಿದೆ.

ರಾಜ್ಯ ಸರಕಾರಗಳು ಕೂಡ ತಾವೇನು ಕಡಿಮೆ ಎಂಬಂತೆ- ನಗರಗಳ ಅಭಿವೃದ್ದಿಗೆ ನೂರಾರು ಕೋಟಿ ರೂ. ಅನುದಾನ ನೀಡುತ್ತಲೇ ಇವೆ. ಒಟ್ಟಾರೆ ಅಭಿವೃದ್ಧಿ ಎಂದರೆ- ನಗರೀಕರಣ ಎಂಬುದು ಆಳುವವರ ಧೋರಣೆಯಾದರೆ, ಸಮಾಜದ ಚಿಂತನೆ ಇದಕ್ಕಿಂತ ಭಿನ್ನವಾಗಿಲ್ಲ.

ಮೊದಲೆಲ್ಲಾ ಕೆಟ್ಟು ಪಟ್ಟಣ ಸೇರು ಎಂದು ಜನ ಹೇಳುತ್ತಿದ್ದರು. ಅಂದರೆ- ಒಳ್ಳೆಯವರು ಹಳ್ಳಿಯಲ್ಲಿಯೇ ಉಳಿಯುತ್ತಿದ್ದರು ಎಂದರ್ಥ. ಈಗ ಕೆಡಲು(ಸ್ವಭಾವತಃ ಅಲ್ಲ, ಉದ್ಧಾರವಾಗಲು ಇಷ್ಟವಿಲ್ಲದವರು) ಬಯಸುವವರು ಮಾತ್ರ ಹಳ್ಳಿಯಲ್ಲಿ ಉಳಿಯಬೇಕು ಎಂಬಂತಾಗಿದೆ. ಹಳ್ಳಿಗಳು ಕರಗುತ್ತಿವೆ. ಅಲ್ಲಿ ಬದುಕು ಸಾಗಿಸುವುದು ದುಸ್ತರ ಎಂಬ ಮನೋಭಾವಕ್ಕೆ ಸಮಾಜ ಬಂದಿದೆ.

‘ಇಂಥ ಹೊತ್ತಲ್ಲಿ ಯಾರೂ ಹಳ್ಳಿಗೆ ಹಿಂದುರುಗಿ, ಅಲ್ಲೊಂದು ಮಾದರಿ ಬದುಕು ಕಟ್ಟಿಕೊಡಿ’- ಎಂದು ಹೇಳುವವರೇ ಇಲ್ಲದಂತಾಗಿದೆ. ರೈತನ ಬೆಳೆದ ಬೆಳೆಗೆ ಸರಿಯಾದ ಬೆಲೆ ಇಲ್ಲದೇ ಇರುವುದು; ಕೃಷಿ ನಷ್ಟದಾಯವಾಗಿರುವುದು ಕೂಡ ಜನತೆ ಹಳ್ಳಿಯಿಂದ ವಿಮುಖವಾಗಲು ಕಾರಣವಾಗಿದೆ. ಹಾಗಾಗಿ, ಹಳ್ಳಿಗೆ ಬನ್ನಿ ಎಂದು ಹೇಳುವವರು ಕೂಡ ನೂರು ಬಾರಿ ಯೋಚಿಸುವಂತಾಗಿದೆ.

ಈ ಎಲ್ಲದರ ಪರಿಣಾಮಗಳನ್ನು ನಾವು, ನೀವು ಗುರುತಿಸದಿದ್ದರೂ- ಕೋಪನ್‌ಹೇಗನ್ ಸಮಾವೇಶ ಗುರುತಿಸಿದೆ. ಹವಾಮಾನ ಬದಲಾವಣೆ ತಡೆಗೆ ಕೂಡಲೇ ಕಾರ್ಯಪ್ರವೃತ್ತರಾಗಿ ಎಂಬ ಘೋಷಣೆಯ ಹಿಂದಿನ ಸಾರ, ಸುಸ್ಥಿರ ಹಳ್ಳಿಗಳನ್ನು ನಿರ್ಮಿಸಿ ಎಂಬುದೇ ಆಗಿದೆ.

ಮಾಧ್ಯಮಗಳು ಕೂಡ ತಮ್ಮದೇ ಆದ ಚೌಕಟ್ಟಿನಲ್ಲಿ, ಪರಿಧಿಯಲ್ಲಿ ಕಾರ್ಯಪ್ರವೃತ್ತರಾಗಲೇ ಬೇಕಿದೆ. ಹಾಗಾಗಿಯೇ ಹೇಳಿದ್ದು, ಗ್ರಾಮೀಣ ವರದಿಗಾರಿಕೆಯನ್ನು ಜನಪ್ರಿಯಗೊಳಿಸುವ ಸವಾಲನ್ನು ನಾವು ಸ್ವೀಕರಿಸಬೇಕಿದೆ.

ಗ್ರಾಮೀಣ ವರದಿಗಾರಿಕೆಯ ಅರ್ಥವನ್ನು ಕೃಷಿಕ ಮತ್ತು ಆತನ ಆತ್ಮಹತ್ಯೆಯಂಥ ಸೆನ್ಸೇಷನಲ್ ಸುದ್ದಿಗೆ ಮಾತ್ರ ಸೀಮಿತಗೊಳಿಸಿಕೊಳ್ಳಬೇಕಿಲ್ಲ. ಅದನ್ನು ವಿಶಾಲಾರ್ಥವಾಗಿ ಸ್ವೀಕರಿಸಬೇಕಿದೆ.

ಹಳ್ಳಿಯ ರೋಗ-ರುಜಿನದಿಂದ ಹಿಡಿದು. ಗ್ರಾಮವೊಂದರ ಸರ್ವಾಂಗಿಣ ಅಭಿವೃದ್ಧಿಗೆ ಏನು ಮಾಡಬೇಕಿದೆ, ಆತನ ಬೆಳೆಗೆ ವೈಜ್ಞಾನಿಕ ಬೆಲೆ ನೀತಿ ನೀಡಿಸುವುದು ಹೇಗೆ ?, ಹಳ್ಳಿಯಲ್ಲಿರುವ ಸಾಮಾಜಿಕ ಹಾಗೂ ಆರ್ಥಿಕ ಅಸಮಾನತೆ ನಿವಾರಿಸಲು ಏನು ಮಾಡಬೇಕು, ಹಳ್ಳಿಯಲ್ಲಿ ಜೀವಂತವಿರುವ ಜಾತಿಯತೆಯನ್ನುತೊಲಗಿಸುವುದು ಹೇಗೆ ?, ಅಸ್ಪೃಶ್ಯತೆಗೆ ಪರಿಹಾರ ಏನು, ಹಳ್ಳಿಯ ಸಾಕ್ಷರತೆ ಹೆಚ್ಚಿಸಲು ಏನು ಮಾಡಬೇಕು... ನಾನಾ ಸಂಗತಿಗಳ ಮೇಲೆ ಮಾಧ್ಯಮಗಳು ಆಸ್ಥೆಯಿಂದ ಗಮನವಹಿಸಬೇಕಿದೆ.

ಏಕೆಂದರೆ- ಯುವಕರನ್ನು, ಕಾಯಕಯೋಗಿಗಳನ್ನು ಹಳ್ಳಿಗೆ ವಾಪಸ್ ಕರೆತರಬೇಕು ಎಂದರೆ, ಅಲ್ಲೊಂದು ವಾತಾವರಣ ಮೂಡಲೇ ಬೇಕು. ಹಳ್ಳಿಯಲ್ಲೂ ದುಡಿಮೆ ಇದೆ, ಸುಸ್ಥಿರ ಬದುಕು ಕಟ್ಟಿಕೊಳ್ಳಲು ಸಾಧ್ಯವಿದೆ ಎಂಬ ಪರಿಸ್ಥಿತಿ ನಿರ್ಮಾಣವಾಗಬೇಕು. ಈ ನಿಟ್ಟಿನಲ್ಲಿ ಮಾಧ್ಯಮಗಳು ತಮ್ಮ ಪಾತ್ರ ನಿರ್ವಹಿಸಬೇಕು. ಇದು ಹೇಗಿರಬೇಕು ಎಂಬುದನ್ನು ಪತ್ರಿಕೋದ್ಯಮದ ತಜ್ಞರು ಕುಳಿತು ಚರ್ಚಿಸಲಿ. ಆದರೆ, ಈ ಕೆಲಸವಂತೂ ಆಗಲೇ ಬೇಕು.

ಗಾಂಧೀಜಿಯವರು 1922 ರಲ್ಲಿ ಈ ದೇಶದ ಯುವಕರನ್ನು ಉದ್ದೇಶಿಸಿ ಬರೆದ ‘ಗ್ರಾಮ ಸೇವ’ ಎಂಬ ಕಿರು ಪುಸ್ತಕವನ್ನು ಓದಿದರೆ, ಅದೆಲ್ಲವೂ ಈಗಷ್ಟೇ ಬರೆದ ಪತ್ರದಂತಿದೆ.

ಆರ್ತವಾಣಿ ಶೀರ್ಷಿಕೆಯಲ್ಲಿ ಗಾಂಧೀಜಿ ಬರೆದ ಕೆಲವು ಸಾಲುಗಳು ಹೀಗಿವೆ- ‘.... ಬ್ರಿಟಿಷರು ಭಾರತಕ್ಕೆ ಬರುವ ಮುನ್ನ, ನಮ್ಮ ಹಳ್ಳಿ ಜನ ಗುಡಿಸಲುಗಳಲ್ಲಿ ನೂಲುತ್ತಿದ್ದರು, ನೇಯುತ್ತಿದ್ದರು ಮತ್ತು ವ್ಯವಸಾಯದಿಂದ ಸಾಲದ ಹುಟ್ಟುವಳಿಯನ್ನು ಪೂರ್ಣಗೊಳಿಸುತ್ತಿದ್ದರು. ಇಂಥ ಗೃಹ ಕೈಗಾರಿಕೆಯನ್ನು ಆಂಗ್ಲರು ಅಮಾನಿಷ ನೀಚಕೃತ್ಯಗಳಿಂದ ನಷ್ಟಪಡಿಸಿದರು. ಪರಿಣಾಮ- ತೊಗಲು ಮೂಳೆಯಿಂದ ಮುಚ್ಚಿರುವ ಭಾರತೀಯ ಹಳ್ಳಿಗರು, ಜರ್ಜರಿತ ಶರೀರ ಕಣ್ಣು-ಕಂಗಳು ಇಲ್ಲದೇ ಕಂಡು ಬರುತ್ತಿದ್ದಾರೆ. ಇದೆಲ್ಲವೂ ಶಹರವಾಸಿಗಳಿಗೆ ಅರ್ಥವಾಗುತ್ತಿಲ್ಲ ಇಲ್ಲವೇ ವಿತಂಡವಾದ ಎಂದು ಸುಮ್ಮನಾಗುತ್ತಿದ್ದಾರೆ....’

ಗಾಂಧೀಜಿ ತಮ್ಮ ಪುಸ್ತಕದಲ್ಲಿ ಹಳ್ಳಿಗಳ ಉದ್ಧಾರದ ಬಗ್ಗೆ ಮಾತನಾಡಿದ್ದಾರೆ. ಗ್ರಾಮೀಣ ವರದಿಗಾರಿಕೆ ಬಗ್ಗೆ ಚಿಂತನೆ ಮಾಡುವವರು ಈ ನೆಲೆಯಲ್ಲಿ ಯೋಚಿಸುವ ಅನಿವಾರ್ಯತೆ ಇದೆ.

ಗ್ರಾಮೀಣ ವರದಿಗಾರಿಕೆಯನ್ನು ಜನಪ್ರಿಯ ಇಲ್ಲವೇ ಜನಪರಗೊಳಿಸಲು ಮುಂದಾದರೆ, ಮಾರ್ಗಗಳು ಸಿಗುತ್ತವೆ. ಹಾಗಾಗಿ, ನಾನಿಲ್ಲಿ ನಿರ್ದಿಷ್ಟ ಮಾರ್ಗಗಳನ್ನು ಹೇಳಿಲ್ಲ ಎನ್ನುವುದಕ್ಕಿಂತ, ಈ ಕ್ಷಣಕ್ಕೆ ಅದು ಹೊಳೆಯುತ್ತಿಲ್ಲ. ಗಾಂಧಿಯನ್ನು ಅನುಸರಿಸೋಣ ಎಂದರೆ, ನಗುವವರೇ ಹೆಚ್ಚಿರುತ್ತಾರೆ. ಅದಕ್ಕೆ ಕಾರಣಗಳು ಇವೆ. ಗ್ರಾಮೀಣ ವರದಿಗಾರಿಕೆಯನ್ನು ಆದರ್ಶವಾಗಿ ಸ್ವೀಕರಿಸುವುದು ಕಷ್ಟ. ಪತ್ರಿಕಾ ವೃತ್ತಿ ಎಂಬುದೇ ಉದ್ಯಮವಾಗಿರುವ ಸಂದರ್ಭದಲ್ಲಿ, ಅದು ಲಾಭ-ನಷ್ಟದ ಪ್ರಶ್ನೆಯನ್ನು ಮುಂದಿಟ್ಟುಕೊಂಡೇ ವ್ಯವಹರಿಸುತ್ತದೆ. ಗಾಂಧಿ ವಿಚಾರಧಾರೆಯನ್ನುಆಲಿಸಲು, ಒಂದು ವೇಳೆ ಅದನ್ನು ಒಪ್ಪಿದರೂ- ಅನುಷ್ಠಾನಗೊಳಿಸಲು ಪುರುಸೊತ್ತು- ಶಕ್ತಿ ಎಲ್ಲಿದೆ ಎಂಬ ಪ್ರಶ್ನೆಯನ್ನು ಲಂಕೇಶ್ ಅಂಥವರೇ ಕೇಳಿದ್ದಾರೆ.
ವಿಪರ್ಯಾಸಗಳ ಮೇಲೆ ಪತ್ರಿಕೆಗಳ ಸವಾರಿ ಎಂಬ ಶೀರ್ಷಿಕೆಯ ಟೀಕೆ-ಟಿಪ್ಪಣಿಯಲ್ಲಿ ಲಂಕೇಶ್ ಬರೆಯುತ್ತಾರೆ- ‘.... ಬರೀ ಸುದ್ದಿಗಳನ್ನು ಅಚ್ಚು ಮಾಡಿದರೆ, ವೃತ್ತಪತ್ರಿಕೆಯ ಬೆಲೆ ಪುಸ್ತಕದ ಬೆಲೆಯಷ್ಟೇ ಆಗುತ್ತದೆ. ಹಾಗಾಗಿ, ಪತ್ರಿಕೆಗಳಿಗೆ ಶ್ರೀಮಂತರು ಬೇಕು, ಜಾಹೀರಾತು ಬೇಕು. ಹಣ ಕೊಡುವವನು ಶ್ರೀಮಂತ. ಆದರೆ, ಪತ್ರಿಕೆ ಹೋರಾಡಬೇಕಾಗಿರುವುದು ಬಡವರಿಗಾಗಿ ಮತ್ತು ಸಾಮಾನ್ಯ ಜನತೆಗಾಗಿ. ಇದು ಪತ್ರಿಕೆಯ ದ್ವಂದ್ವ. ಆದ್ದರಿಂದಲೇ ವೃತ್ತಪತ್ರಿಕೆಗಳು ಒಂದು ಕೈಯಲ್ಲಿ ಕ್ರಾಂತಿಯ ಭಿತ್ತಿಚಿತ್ರ ಹಿಡಿದುಕೊಂಡು, ಇನ್ನೊಂದು ಕೈಯಲ್ಲಿ ಮಾಲೀಕರಿಗೆ ಬೀಸಣಿಗೆ ಹಿಡಿದು ಗಾಳಿ ಹಾಕುತ್ತಾ ನಡೆಯಬೇಕಾಗುತ್ತದೆ. ವೃತ್ತ ಪತ್ರಿಕೆಯ ಕ್ರಾಂತಿಯ ಮಾತು ನಗೆ ತರುತ್ತವೆ...’

ಲಂಕೇಶ್ ಹೇಳುವ ಈ ವಿಪರ್ಯಾಸವನ್ನು ಗಮನದಲ್ಲಿ ಇಟ್ಟುಕೊಂಡೇ, ಪತ್ರಿಕೆಗಳು ಗ್ರಾಮೀಣ ಮುಖಿ ಆಗಲೆ ಬೇಕಿದೆ. ಪತ್ರಿಕೆಗಳ ಈ ಕಾರ್ಯಕ್ಕೆ ಸಮಾಜವೂ ಬೆಂಬಲ ನೀಡಬೇಕಿದೆ. ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ, ರಾಷ್ಟ್ರೀಯ ಆರೋಗ್ಯ ಅಭಿಯಾನ, ಶಿಕ್ಷಣ ಕಾಯ್ದೆದಂಥ ಜನಪರ ಕಾರ್ಯಕ್ರಮಗಳ ಬಗ್ಗೆ ಅರಿವು ಮೂಡಿಸುವ ಹಾಗೂ ಅವು ಭ್ರಷ್ಟಾಚಾರ ರಹಿತವಾಗಿ ಅನುಷ್ಠಾನಗೊಳ್ಳುವ ಕೆಲಸವನ್ನು ಪತ್ರಿಕೆಗಳು ಕೈಗೆತ್ತಿಕೊಳ್ಳಬೇಕಿದೆ.

ರೈತರ ಆತ್ಮಹತ್ಯೆ ಬಗ್ಗೆ ಪುಟ್ಟಗಟ್ಟಲೇ ಬರೆಯುವ, ಮರುಕ ವ್ಯಕ್ತಪಡಿಸುವ ನಮ್ಮ ನಗರವಾಸಿಗಳು ಯಾವುದಾದರೊಂದು ರೂಪದಲ್ಲಿ ರೈತನ ನೆರವಿಗೆ ಧಾವಿಸಲೇಬೇಕು. ಎಲ್ಲವನ್ನೂ ಸರಕಾರ ಮಾಡುತ್ತದೆ ಎಂದು ಕೈ ಕಟ್ಟಿ ಕೂರುವುದರಿಂದ ಯಾವ ಬದಲಾವಣೆಂಯೂ ಆಗುವುದಿಲ್ಲ. ಏಡ್ಸ್, ಮಕ್ಕಳ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸುವಂಥ ಲೇಖನ ಬರೆದರೆ, ಅದನ್ನು ಪ್ರೋತ್ಸಾಹಿಸಲು ಎನ್‌ಜಿಒಗಳು ಇವೆ. ಆದರೆ, ಕೃಷಿಯ ಬಗ್ಗೆ ಧನಾತ್ಮಕ ಲೇಖನ, ವರದಿ ಬರೆಯುವ ಪತ್ರಕರ್ತರನ್ನು ಪ್ರೋತ್ಸಾಹಿಸುವವರೇ ಇಲ್ಲ. ಇದರಿಂದ ಬಹಳ ದೊಡ್ಡ ಕ್ರಾಂತಿಯಾಗುತ್ತದೆ ಎಂದೇನಿಲ್ಲ. ಆದರೆ, ಇಂಥ ಚಿಕ್ಕ-ಪುಟ್ಟ ಸಂಗತಿಗಳ ಮೂಲಕ ಪ್ರತಿಯೊಬ್ಬರ ಭಾಗವಹಿಸುವಿಕೆ ಅಗತ್ಯ.

ಕಡೆಯದಾಗಿ ಒಂದು ಮಾತು.
ಒಂದು ದಶಕದಿಂದ ಗ್ರಾಮೀಣ ಬದುಕಿನ ಸಂಕಟಗಳನ್ನು ಮನೋಜ್ಷವಾಗಿ ತೆರೆದಿಡುತ್ತಿರುವ ಪತ್ರಕರ್ತ ಪಿ. ಸಾಯಿನಾಥ್ ತಮ್ಮ ಪ್ರಸಿದ್ಧ ‘ಪ್ರತಿಯೊಬ್ಬರ ಒಳ್ಳೆಯ ಬರವನ್ನು ಪ್ರೀತಿಸುತ್ತಾರೆ’ - ಕೃತಿಯಲ್ಲಿ ಒಂದು ವಿಚಾರ ಪ್ರಸ್ತಾಪಿಸುತ್ತಾರೆ.
ಬರ ಎಂಬುದು ಹಲವರ ಪಾಲಿಕೆ ಮೂರನೇ ಫಸಲು. ರಾಜಕಾರಣಿಗಳು, ಅಧಿಕಾರಿಗಳು ಇದನ್ನು ನಿರಂತರವಾಗಿ ಕಬಳಿಸುತ್ತಲೇ ಇರುತ್ತಾರೆ. ಸ್ವಾರಸ್ಯ ಎಂದರೆ- ತಾಲೂಕು ಮಟ್ಟದ ಕೆಲವು ಬಿಡಿ ವರದಿಗಾರರು ಕೂಡ ಇದರಲ್ಲಿ ಪ್ರತ್ಯಕ್ಷವಾಗಿಯೋ- ಪರೋಕ್ಷವಾಗಿಯೋ ಭಾಗಿಯಾಗಿರುತ್ತಾರೆ. ವಿಶೇಷ ಅಂದ್ರೆ- ಅವರಲ್ಲಿ ಬಹುಪಾಲು ಜನ ಸಣ್ಣಮಟ್ಟದ ಗುತ್ತಿಗೆ ಕೆಲಸ ಮಾಡುತ್ತಿರುತ್ತಾರೆ !

ನಮ್ಮ ತಾಲೂಕು ಮಟ್ಟದಲ್ಲಿ ಇರುವ ಸ್ಟ್ರಿಂಜರ್ ಎಂಬ ಬಿಡಿ ವರದಿಗಾರರು ಗ್ರಾಮೀಣ ವರದಿಗಾರಿಕೆಗೆ ಸಲ್ಲಿಸುತ್ತಿರುವ ಕೊಡುಗೆ ಇದು. ಇದು ಕೂಡ ಬದಲಾಗಬೇಕು.

ಚೀ. ಜ. ರಾಜೀವ
READ MORE - ಗ್ರಾಮೀಣ ವರದಿಗಾರಿಕೆ ಏನಾಗಿದೆ ?

ಸದ್ಯವೇ, ಮತ್ತೆ ಆರಂಭ...!

Monday, January 25, 2010

ಸದ್ಯವೇ , ಮತ್ತೆ ಆರಂಭ ಎನ್ಲಲು ಬ್ಲಾಗ್ ನ್ನು ಮುಚ್ಚಿರಲಿಲ್ಲ. ಸ್ವಲ್ಪ ಕಾಲ ಕಾರ್ಯ ಒತ್ತಡದ ಮಧ್ಯೆ ಹೊಸ ಲೇಖನಗಳನ್ನು ಹಾಕಿರಲಿಲ್ಲ. ಅದಕ್ಕೆ ಮತ್ತೊಂದು ಕಾರಣವೂ ಇದೆ. ಪತ್ರಿಕೋದ್ಯಮ ವಿದ್ಯಾರ್ಥಿಗಳಿಂದ ಬಂದ ಲೇಖನಗಳು ತೀರಾ ಕಡಿಮೆ.

ಆದರೂ, ಹೊಸ ಲೇಖನಗಳೊಂದಿಗೆ ಮತ್ತೆ ಆರಂಭಿಸುತ್ತಿದ್ದೇವೆ. ನೀವು ಬನ್ನಿ, ಓದಿ, ಅಭಿಪ್ರಾಯಿಸಿ. ನಂತರ ನಿಮ್ಮ ಗೆಳೆಯರಿಗೆ ಹೇಳಿ...ಜತೆಗೆ ನಿಮ್ಮ ಬ್ಲಾಗ್ ಲಿಂಕ್ ನಲ್ಲಿ ಹಾಕಿಕೊಳ್ಳಿ.
ಧನ್ಯವಾದಗಳೊಂದಿಗೆ
READ MORE - ಸದ್ಯವೇ, ಮತ್ತೆ ಆರಂಭ...!

ಆದರ್ಶ, ಪತ್ರಕರ್ತ ಮತ್ತು ಸಾಂವಿಧಾನಿಕ ಮಿತಿಗಳು

Wednesday, December 2, 2009

ದೇಶಕ್ಕೆ, ಈ ಸಮಾಜಕ್ಕೆ ನಿಷ್ಠನಾಗಿರಬೇಕೋ ಪತ್ರಕರ್ತನೂ ಅಷ್ಟೇ ನಿಷ್ಠೆಯನ್ನು ದೇಶಕ್ಕೆ, ಸಮಾಜಕ್ಕೆ ತೋರಿಸಲೇಬೇಕು. ಆ ಬಗ್ಗೆ ಖಂಡಿತಾ ಎರಡು ಮಾತಿಲ್ಲ ಎನ್ನುತ್ತಾರೆ ವಿಜಯ್ ಜೋಷಿ.

ಇತ್ತೀಚೆಗೆ ನಡೆದ ಸಮೀಕ್ಷೆಯೊಂದರ ಪ್ರಕಾರ ಜನಸಾಮಾನ್ಯರ ದ್ವೇಷಕ್ಕೆ ಅತ್ಯಂತ ಹೆಚ್ಚು ಒಳಗಾಗಿರುವ ಮೂರು ವ್ಯಕ್ತಿಗಳೆಂದರೆ ರಾಜಕಾರಣಿಗಳು, ಪೋಲೀಸರು ಮತ್ತು ಪತ್ರಕರ್ತರು. ಪತ್ರಕರ್ತರು ಈಗ ಮೂರನೆಯ ಸ್ಥಾನದಲ್ಲಿರಬಹುದು. ಆದರೆ ಪರಿಸ್ಥಿತಿ ಇದೇ ರೀತಿ ಮುಂದುವರೆದರೆ ಪತ್ರಕರ್ತರು ಮೊದಲನೆಯ ಸ್ಥಾನವನ್ನು ಆಕ್ರಮಿಸುವ ದಿನ ಬಹಳ ದೂರವಿಲ್ಲ ಎಂದು ನನಗನಿಸುತ್ತದೆ.

ಯಾವಾಗಲೂ ಮಾಧ್ಯಮಗಳನ್ನು ತೆಗಳುವವರ ಒಂದು ದೊಡ್ಡ ಗುಂಪೇ ನಮ್ಮ ಸಮಾಜದಲ್ಲಿದೆ. ಅಂಥ ಗುಂಪಿಗೆ ಸೇರಿದ ವ್ಯಕ್ತಿಯೊಬ್ಬರು ಈ ಮೇಲಿನ ಮಾತನ್ನು ಹೇಳಿದ್ದರೆ ಅದನ್ನು ಅಲಕ್ಷಿಸಿಬಿಡಬಹುದಿತ್ತು. ಆದರೆ ಇತ್ತೀಚೆಗೆ ಮಾಧ್ಯಮದ ಹಿರಿಯ ವ್ಯಕ್ತಿಯೊಬ್ಬರು ಈ ರೀತಿ ಅಭಿಪ್ರಾಯಪಟ್ಟಿರುವುದರಿಂದ ಈ ಮಾತಿನ ಬಗ್ಗೆ ಗಂಭೀರವಾಗಿ ಪತ್ರಿಕೋದ್ಯಮದ ಬಗ್ಗೆ ಪ್ರೀತಿ ಇರುವ ಪ್ರತಿಯೊಬ್ಬರೂ ಆಲೋಚಿಸಬೇಕಾಗಿದೆ.

ಆ ಹಿರಿಯರ ಬಗ್ಗೆ, ಅವರ ಮಾತಿನ ಬಗ್ಗೆ ಗೌರವ ಇಟ್ಟುಕೊಂಡೇ ನನ್ನ ಮುಂದಿನ ಬರಹವನ್ನು ಬೆಳೆಸುತ್ತಿದ್ದೇನೆ.

ಭಾರತದ ಸಂವಿಧಾನದ ಪ್ರಕಾರ ನ್ಯಾಯಾಂಗ, ಶಾಸಕಾಂಗ ಮತ್ತು ಕಾರ್ಯಾಂಗ ಪ್ರಜಾಪ್ರಭುತ್ವದ ಮೂರು ಅಂಗಗಳು. ಸಂವಿಧಾನ ಇವೆಲ್ಲವಕ್ಕೂ ಮೇಲು. ಈ ಯಾವ ಅಂಗಗಳೂ ಸಂವಿಧಾನವನ್ನು ಮೀರಿ ಕೆಲಸ ಮಾಡುವಂತಿಲ್ಲ. ಹಾಗೆ ಯಾವುದೇ ಒಂದು ಅಂಗ ಸಂವಿಧಾನದ ಆಶಯಕ್ಕೆ ವಿರುದ್ಧವಾಗಿ ಕೆಲಸ ಮಾಡಲು ಹವಣಿಸಿದರೆ ಆ ಅಂಗಕ್ಕೆ ಲಗಾಮು ಹಾಕಲು ಬಲವಾದ, ಸ್ವತಂತ್ರವಾದ ನ್ಯಾಯಾಂಗ ನಮ್ಮಲ್ಲಿದೆ.

ನೆನಪಿಡಿ ಎಲ್ಲಿಯೂ ಕೂಡ ಮಾಧ್ಯಮಗಳು ಪ್ರಜಾಪ್ರಭುತ್ವದ ನಾಲ್ಕನೆಯ ಅಂಗ ಎಂದು ಸಂವಿಧಾನಲ್ಲಿ ಬರೆದಿಲ್ಲ. ಆದರೆ ಪತ್ರಿಕಾರಂಗವನ್ನು ಪ್ರಜಾಪ್ರಭುತ್ವದ ನಾಲ್ಕನೆಯ ಅಂಗ ಎಂದು ನಾವೆಲ್ಲ ಪ್ರೀತಿಯಿಂದ, ಗೌರವದಿಂದ ಒಪ್ಪಿಕೊಂಡಿದ್ದೇವೆ. ಹಾಗೂ ಪತ್ರಿಕಾರಂಗ ಪ್ರಜಾಪ್ರಭುತ್ವದ ಉಳಿದ ಮೂರು ಅಂಗಗಳಂತೆಯೇ ರಾಷ್ಟ್ರನಿರ್ಮಾಣದ ಕಾರ್ಯದಲ್ಲಿ ಸಂಪೂರ್ಣವಾಗಿ ತೊಡಗಿಕೊಳ್ಳಬೇಕು ಎಂದು ಅಪೇಕ್ಷೆಪಡುತ್ತೇವೆ, ಅಷ್ಟೆ!

ನ್ಯಾಯಾಂಗ, ಕಾರ್ಯಾಂಗ ಮತ್ತು ಶಾಸಕಾಂಗ ಪ್ರಜಾಪ್ರಭುತ್ವದ ಆಧಾರ ಸ್ಥಂಭಗಳು ಅಂತ ನಮ್ಮ ಸಂವಿಧಾನವೇ ಅಧಿಕೃತವಾಗಿ ಘೋಷಿಸಿರುವುದರಿಂದ ಈ ಮೂರು ಅಂಗಗಳಲ್ಲಿ ಕಾರ್ಯನಿರ್ವಹಿಸುವ ವ್ಯಕ್ತಿಗಳಿಗೆ ಸಂವಿಧಾನದತ್ತವಾಗಿ ರಕ್ಷಣೆ ಇದೆ. ರಾಜಕಾರಣಿಗಳಿಗೆ ಅವರವರ ಸ್ಥಾನಕ್ಕನುಗುಣವಾಗಿ ವಿವಿಧ ಶ್ರೇಣಿಯ ಭದ್ರತೆ ಇದೆ. ನ್ಯಾಯಾಂಗದಲ್ಲಿರುವವರಿಗೂ (ನ್ಯಾಯಾಧೀಶರಿಗೆ) ಭದ್ರತೆ ಇದೆ. ಹಾಗೆಯೇ ಕಾರ್ಯಾಂಗದವರಿಗೂ ಅವರವರ ಸ್ಥಾನಕ್ಕನುಗುಣವಾದ ಭದ್ರತೆ ಇರುತ್ತದೆ. ಈ ಮೂರು ಅಂಗಗಳಲ್ಲಿರುವ ಎಲ್ಲರಿಗೂ ಸರಕಾರಿ ಭದ್ರತೆ ಇರದೆ ಇರಬಹುದು. ಆದರೆ ಸಂದರ್ಭ ಬಂದಾಗ ಸಂವಿಧಾನದ ಚೌಕಟ್ಟಿನೊಳಗೆ ಸರಕಾರಿ ಭದ್ರತೆಯನ್ನು ಕೇಳಲು ಅವರಿಗೆ ಅವಕಾಶ ಇರುವುದಂತೂ ಎಲ್ಲರಿಗೂ ತಿಳಿದ ಸತ್ಯ.

ಸಂವಿಧಾನವೇ ನ್ಯಾಯಾಂಗ, ಶಾಸಕಾಂಗ ಮತ್ತು ಕಾರ್ಯಾಂಗಕ್ಕೆ ಅಧಿಕೃತ ಮಾನ್ಯತೆ ನೀಡಿರುವುದರಿಂದ ಈ ಮೂರು ಅಂಗಗಳಲ್ಲಿ ಕೆಲಸ ಮಾಡುವವರು ಸರಕಾರಿ ಹಣದಿಂದಲೇ ಸಂಬಳ ಪಡೆಯುತ್ತಾರೆ. ಸರಕಾರಿ ಹಣ ಅಂದರೆ ಜನರ ತೆರಿಗೆ ಹಣ. ಹಾಗಾಗಿಯೇ ಅವರು ಜನರಿಗೆ ಉತ್ತರದಾಯಿಯಾಗಿರಬೇಕು ಮತ್ತು ಅವರ ಆಸ್ತಿಪಾಸ್ತಿಗಳನ್ನು ಸಾರ್ವಜನಿಕವಾಗಿ ಘೋಷಣೆ ಮಾಡಬೇಕು ಎಂದು ನಿರೀಕ್ಷಿಸುವುದು ಸಂವಿಧಾನಬದ್ಧವೇ ಆಗಿರುತ್ತದೆ.

ಆದರೆ ಒಮ್ಮೆ ಪತ್ರಕರ್ತರ ಪರಿಸ್ಥಿತಿಯ ಬಗ್ಗೆ ಆಲೋಚನೆ ಮಾಡಿ. ಹೇಗಿದ್ದರೂ ಪತ್ರಿಕಾರಂಗ ಸಂವಿಧಾನದ ಪ್ರಕಾರ ಭಾರತೀಯ ಪ್ರಜಾಪ್ರಭುತ್ವದ ನಾಲ್ಕನೆಯ ಅಂಗ ಅಲ್ಲ. ಆನರು ಪ್ರೀತಿ, ಗೌರವದಿಂದ ಪತ್ರಿಕಾರಂಗಕ್ಕೆ ಆ ಮಾನ್ಯತೆಯನ್ನು ಕೊಟ್ಟಿದ್ದಾರೆ ಅಷ್ಟೆ. ಆದರೆ ಜನರ ಪ್ರೀತಿ, ಗೌರವಗಳು ಸಾಂವಿಧಾನಿಕ ರಕ್ಷಣೆಯನ್ನು ನೀಡುವುದಿಲ್ಲವಲ್ಲ? ನ್ಯಾಯಾಂಗ, ಕಾರ್ಯಾಂಗ ಮತ್ತು ಶಾಸಕಾಂಗಗಳಲ್ಲಿ ಕೆಲಸ ಮಾಡುವವರಿಗಿರುವಂತೆ ಪತ್ರಿಕಾರಂಗದಲ್ಲಿರುವವರಿಗೆ ವಿಶೇಷ ರಕ್ಷಣೆಯನ್ನೇನೂ ನೀಡುವುದಿಲ್ಲವಲ್ಲ? ಅದಲ್ಲದೆ ಪತ್ರಿಕೆಗಳ ನ್ಯೂಸ್‌ಪ್ರಿಂಟ್‌ಗೆ ಸರಕಾರದ ಸಬ್ಸಿಡಿ ಮತ್ತು ಸರಕಾರದ ಕೆಲವು ಜಾಹೀರಾತುಗಳು ಆಗಾಗ ಪತ್ರಿಕೆಗಳಿಗೆ ಸಿಗುವುದನ್ನು ಬಿಟ್ಟರೆ ಬೇರೆ ಯಾವ ರೀತಿಯಿಂದಲೂ ಸರಕಾರದ (ಜನರ) ಹಣವನ್ನು ಪತ್ರಿಕೆಗಳು ಉಪಯೋಗಿಸಿಕೊಳ್ಳುವುದಿಲ್ಲ. ಅವು ಬದುಕಿರುವುದೇ ಓದುಗರು ನೀಡುವ ಹಣ ಮತ್ತು ಜಾಹೀರಾತುದಾರರು ನೀಡುವ ಹಣದಮೇಲೆ. ಪರಿಸ್ಥಿತಿ ಹೀಗಿರುವಾಗ ಪತ್ರಕರ್ತರೆಲ್ಲಾ ತಮ್ಮ ಆಸ್ತಿಯನ್ನು ಘೋಷಣೆ ಮಾಡಬೇಕು ಎಂದು ಆಗ್ರಹಿಸುವುದಕ್ಕೆ ಸಾಂವಿಧಾನಿಕ ಆಧಾರ ಯಾವುದು?

ಹಾಗಂತ ಪತ್ರಕರ್ತರಿಂದ ನಿಷ್ಪಕ್ಷಪಾತ ಬರಹ, ಪ್ರಾಮಾಣಿಕತೆ ಮತ್ತು ದೇಶದ ಸಮಗ್ರ ಅಭಿವೃದಿಗಾಗಿ ದುಡಿಯುವುದನ್ನು ಅಪೇಕ್ಷಿಸಬಾರದು ಅಂತಲ್ಲ. ಭಾರತದ ಉಳಿದೆಲ್ಲ ನಾಗರಿಕರಂತೆ ಪತ್ರಕರ್ತ ಕೂಡ ಭಾರತದ ಪ್ರಜೆಯೇ. ಹಾಗೆಯೇ ಪ್ರತಿಯೊಬ್ಬ ಭಾರತೀಯ ಪ್ರಜೆ ಯಾವ ರೀತಿಯಲ್ಲಿ ಈ ದೇಶಕ್ಕೆ, ಈ ಸಮಾಜಕ್ಕೆ ನಿಷ್ಠನಾಗಿರಬೇಕೋ ಪತ್ರಕರ್ತನೂ ಅಷ್ಟೇ ನಿಷ್ಠೆಯನ್ನು ದೇಶಕ್ಕೆ, ಸಮಾಜಕ್ಕೆ ತೋರಿಸಲೇಬೇಕು. ಆ ಬಗ್ಗೆ ಖಂಡಿತಾ ಎರಡು ಮಾತಿಲ್ಲ.

ಆದರೆ ದೇಶಕ್ಕಾಗಿ ಪತ್ರಕರ್ತ ಕೆಲಸ ಮಾಡಬೇಕು ಎಂದು ಆಗ್ರಹಿಸುವಾಗ ಇನ್ನೊಂದು ಸೂಕ್ಷ್ಮವನ್ನೂ ನಾವು ಗಮನಿಸಬೇಕು.

ದೇಶದ ಒಳಿತಿಗಾಗಿ ಪತ್ರಕರ್ತನೊಬ್ಬ ಬರೆಯುವಾಗ (ಅಥವಾ ದೃಶ್ಯಗಳನ್ನು ಚಿತ್ರೀಕರಿಸುವಾಗ) ಆತ ಅನಿವಾರ್ಯವಾಗಿ ಪ್ರಭುತ್ವದ ವೈಖರಿಯನ್ನು ಪಶ್ನಿಸಬೇಕಾದ ಅನೇಕ ಸಂದರ್ಭಗಳನ್ನು ಎದುರಿಸುತ್ತಾನೆ. ಪ್ರಭುತ್ವವನ್ನು ವಿರೋಧಿಸುವುದು ಎಂದರೆ ನಮ್ಮ ದೇಶದಲ್ಲಿ ಸಾಮಾನ್ಯದ ಮಾತೇ? ನಾವೆಷ್ಟೇ ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಮಾತಾಡಿದರೂ ಇವತ್ತು ಪತ್ರಕರ್ತನೊಬ್ಬ ರಾಜಕಾರಣಿಯೊಬ್ಬನ ವಿರುದ್ಧ ಬರೆದರೆ ಆತ ಒಂದಲ್ಲಾ ಒಂದು ದಿನ ಹಾಗೆ ಬರೆದ ಪತ್ರಕರ್ತನ ವಿರುದ್ಧ ತನ್ನ ಹಗೆಯನ್ನು ಹೇಗೆ ತೀರಿಸಿಕೊಳ್ಳಬೇಕು ಅಂತ ಕಾಯುತ್ತಲೇ ಇರುತ್ತಾನೆ. ಇಂಥ ಸಂದರ್ಭದಲ್ಲಿ ಪತ್ರಕರ್ತ ಏನು ಮಾಡಬೇಕು? ತನ್ನ ಜೀವಕ್ಕೆ ಖಂಡಿತವಾಗಿಯೂ ಅಪಾಯವಿದೆ ಅಂತ ಖಚಿತವಾಗಿ ಗೊತ್ತಿದ್ದರೆ ಕೆಲ ಕಾಲದ ಮಟ್ಟಿಗೆ ಪೋಲೀಸ್ ರಕ್ಷಣೆಯನ್ನು ಪಡೆದುಕೊಳ್ಳಬಹುದು. ಆದರೆ ಅದನ್ನೇನೂ ಶಾಶ್ವತವಾಗಿ ಪಡೆದುಕೊಳ್ಳಲು ಸಾಧ್ಯವಿಲ್ಲ. ಹೀಗಿರುವಾಗ ಪತ್ರಕರ್ತ ಯಾವ ಧೈರ್ಯದಲ್ಲಿ ಪ್ರಭುತ್ವವನ್ನು ಪ್ರಶ್ನಿಸಿಯಾನು? 24X 7 ಪತ್ರಕರ್ತರನ್ನು ಬೈಯುತ್ತಾ ಕುಳಿತಿರುವವರಿಂದ ಉತ್ತರದ ನಿರೀಕ್ಷೆಯಿದೆ.

ಹಿಂದೆ ಕನ್ನಡದ ಹೆಸರಾಂತ ದಿನಪತ್ರಿಕೆಯೊಂದರ ಜನಪ್ರಿಯ ಅಂಕಣಕಾರರೊಬ್ಬರು ನಕ್ಸಲರ ವಿರುದ್ಧ ನೇರಮಾತುಗಳ ಲೇಖನ ಬರೆದಾಗ ಉಡುಪಿ ಜಿಲ್ಲೆಯ ಕೆಲ ಪ್ರದೇಶಗಳಲ್ಲಿ ನಕ್ಸಲರು ಕರಪತ್ರ ಹಂಚಿ ಆ ಅಂಕಣಕಾರರ ಜೀವ ತೆಗೆಯುವುದಾಗಿ ಬೆದರಿಕೆ ಹಾಕಿದ್ದರು ಎಂದು ಪತ್ರಿಕೆಗಳಲ್ಲಿ ವರದಿಯಾಗಿತ್ತು. ಇಲ್ಲಿ ಅಂಕಣಕಾರರ ಧೈರ್ಯವನ್ನು ಮೆಚ್ಚಬಹುದಾದರೂ ಅವರಿಗೆ ನಕ್ಸಲರಿಂದ ಯಾವ ಅಪಾಯ ಎದುರಾಗದಂತೆ ರಕ್ಷಣೆ ನೀಡುವವರು ಯಾರು ಎಂಬ ಪ್ರಶ್ನೆ ಬರುತ್ತದೆ. ಅವರು ರಾಜಕಾರಣಿಯೋ ಅಥವಾ ಐಎಎಸ್ ಅಧಿಕಾರಿಯೋ ಆಗಿದ್ದರೆ ಅವರಿಗೆ ಸರಕಾರದಿಂದ ಸದಾಕಾಲ ಭದ್ರತೆ ಸಿಗುತ್ತಿತ್ತು. ಆದರೆ ಪತ್ರಕರ್ತ/ಅಂಕಣಕಾರನಿಗೆ? ಸಿಗುವುದು ಪ್ರಶಂಸೆ ಮಾತ್ರ. ಜೊತೆಗೊಂದಿಷ್ಟು ಮಂದಿಯಿಂದ ಬಯ್ಗುಳಗಳು.

ಪತ್ರಕರ್ತರೇನೂ ಜೀವ ಭಯವನ್ನು ಬಿಟ್ಟು ದುಡಿಯಲು ಬಂದಿರುವ ರೋಬೋಟ್‌ಗಳಲ್ಲವಲ್ಲ? ಅವರಿಗೂ ಅವರದೇ ಆದ ಸಂಸಾರವಿದೆ. ಪ್ರೀತಿಪಾತ್ರರಿದ್ದಾರೆ. ಹಾಗಿರುವಾಗ ಕೇವಲ ಪತ್ರಕರ್ತರು ಮಾತ್ರ ಜೀವ ಭಯ ಬಿಟ್ಟು ಪ್ರಭುತ್ವವನ್ನು ಮತ್ತು ಸಮಾಜದ ಅನ್ಯಾಯ, ಹುಳುಕುಗಳನ್ನು ಪ್ರಶ್ನಿಸುತ್ತಿರಬೇಕು ಎಂದು ನಿರೀಕ್ಷಿಸುವುದನ್ನು ಏನೆಂದು ಕರೆಯಬೇಕು?

ಪತ್ರಕರ್ತನಿಂದ ವೃತ್ತಿಪರತೆಯನ್ನು ನಿರೀಕ್ಷಿಸುವುದಕ್ಕೂ, ಮನುಷ್ಯಪ್ರಯತ್ನಕ್ಕೆ ಮೀರಿದ ಕಾರ್ಯವನ್ನು ನಿರೀಕ್ಷಿಸುವುದಕ್ಕೂ ಸಾಕಷ್ಟು ವ್ಯತ್ಯಾಸಗಳಿವೆ. ಪತ್ರಕರ್ತರಿಂದ ಪ್ರಾಮಾಣಿಕತೆಯನ್ನು, ಪತ್ರಿಕಾ ಧರ್ಮದ ಪಾಲನೆಯನ್ನು ನಿರೀಕ್ಷಿಸಬೇಕು. ಆದರೆ ಸಂವಿಧಾನದಿಂದ ಯಾವ ವಿಶೇಷ ಅಧಿಕಾರ ನೀಡದೆಯೆ ಪ್ರಭುತ್ವದ ವಿರುದ್ಧ ಹೋರಾಡಬೇಕು ಎನ್ನುವ ನಿರೀಕ್ಷೆಗಳನ್ನು ಇಟ್ಟುಕೊಳ್ಳುವುದು ಎಷ್ಟು ಸರಿ?

ಭಾರತದ ಸಂವಿಧಾನದಲ್ಲೆಲ್ಲೂ ಪತ್ರಿಕಾ ಸ್ವಾತಂತ್ರ್ಯ ಎಂದು ಪ್ರತ್ಯೇಕವಾದ ವರ್ಗೀಕರಣ ಇಲ್ಲ. ಅಭಿವ್ಯಕ್ತಿ ಸ್ವಾತಂತ್ರ್ಯದ ಅಡಿಯಲ್ಲೇ ಪತ್ರಿಕೆಗಳ ಮೂಲಕ ತಮಗೆ ಅನಿಸಿದ್ದನ್ನು ಬರೆಯುವ ಸ್ವಾತಂತ್ರ್ಯ ನಮಗೆ (ಭಾರತದ ನಾಗರಿಕರಿಗೆ) ದಕ್ಕಿದೆ. ಪತ್ರಕರ್ತನಿಗೆ ಅಂತ ಯಾವ ವಿಶೇಷ ಅಭಿವ್ಯಕ್ತಿ ಸ್ವಾತಂತ್ರ್ಯವೂ ಇಲ್ಲ. ಹಾಗಾಗಿ ಒಬ್ಬ ವ್ಯಕ್ತಿ ಪತ್ರಿಕಾ ರಂಗದಲ್ಲಿ ಇದ್ದಾನೆ ಎಂಬ ಮಾತ್ರಕ್ಕೆ ಅವನಿಂದ ಉಳಿದ ಪ್ರಜೆಗಳು ಮಾಡಲು ಇಚ್ಛಿಸದ ಕೆಲಸಗಳನ್ನು ನಿರೀಕ್ಷಿಸುವುದು ತಪ್ಪಾದೀತು.

ಇನ್ನು ಕೆಲವು ಮಂದಿ ಪತ್ರಿಕಾ ರಂಗ ಇಂದು ಉದ್ಯಮವಾಗಿದೆ, ಅದರಲ್ಲಿ ಯಾವ ಆದರ್ಶಗಳೂ ಕಾಣಿಸುತ್ತಿಲ್ಲ ಎಂದು ಆರೋಪಿಸುತ್ತಿದ್ದಾರೆ. ಅಂಥವರ ಆರೋಪದ ಬಗ್ಗೆಯೂ ಗೌರವವಿದೆ. ಆದರೆ ಪತ್ರಿಕಾರಂಗದಿಂದ ಮಾತ್ರ ಏಕೆ ಆದರ್ಶಗಳನ್ನು ನಿರೀಕ್ಷಿಸಬೇಕು. ಇಡೀ ಸಮಾಜದಿಂದ ಏಕೆ ಉನ್ನತ ಧ್ಯೇಯಗಳನ್ನು, ಆದರ್ಶಗಳನ್ನು ನಿರೀಕ್ಷಿಸಬಾರದು?

ಪತ್ರಿಕೆಯೊಂದು ಜನರಿಗೆ ಸತ್ಯಸುದ್ದಿಯನ್ನು ಮಾತ್ರ ಕೊಡಬೇಕು, ಸುಳ್ಳನ್ನು ಯಾವ ಕಾರಣಕ್ಕೂ ಕೊಡಬಾರದು ಎಂದು ನಿರೀಕ್ಷಿಸುವುದು ಸರಿ. ಆದರೆ ಆದರ್ಶದ ವ್ಯಸನದಲ್ಲಿ ಪತ್ರಿಕೆಯೊಂದು ತನ್ನ ಮುಖಪುಟದಲ್ಲಿ ದೊಡ್ಡ ಪ್ರಮಾಣದ ಜಾಹೀರಾತುಗಳನ್ನೇ ಪ್ರಕಟಿಸಬಾರದು ಎಂದೆಲ್ಲ ಮಾತಾಡುವುದು ಅರ್ಥಹೀನ. ಪತ್ರಿಕಾರಂಗ ಇವತ್ತು ಒಂದು ಪಕ್ಕಾ ಉದ್ಯಮವಾಗಿದೆ. ಅಲ್ಲಿ ಒಬ್ಬ ಮನುಷ್ಯ ಹತ್ತು ರೂಪಾಯಿ ಬಂಡವಾಳ ಹೂಡಿ ಅದರಲ್ಲಿ ಒಂದಷ್ಟು ಲಾಭ ಪಡೆಯಲು ಪ್ರಯತ್ನಿಸುತ್ತಾನೆ. ಅದರಲ್ಲಿ ತಪ್ಪೇನಿದೆ? ನ್ಯಾಯವಾಗಿ ಲಾಭ ಮಾಡಿಕೊಳ್ಳಲು ನಮ್ಮ ಸಂವಿಧಾನವೇನು ಬೇಡವೆಂದಿಲ್ಲವಲ್ಲ?

ಹಾಗಂತ ಇಂದಿನ ಕೆಲ ಮಾಧ್ಯಮಗಳು ಮಾಡುತ್ತಿರುವ ಅತಿರಂಜಿತ ವರದಿಗಳನ್ನು, ಕೆಲ ಟ್ಯಾಬ್ಲಾಯ್ಡ್‌ಗಳ ಹೂರಣವನ್ನೆಲ್ಲಾ ವ್ಯಾಪಾರಿ ಮನಸ್ಥಿತಿಯಲ್ಲಿ ಒಪ್ಪಿಕೊಳ್ಳಬೇಕು ಎಂದಲ್ಲ. ಆದರೆ ಆದರ್ಶದ ಗುಂಗನ್ನು ಅತಿಯಾಗಿ ತಲೆಗೆ ಹಚ್ಚಿಕೊಂಡು ಪತ್ರಿಕೆಗಳನ್ನು ಸಂತರು ನಡೆಸುವ ಆಶ್ರಮದ ಲಾಭೋದ್ದೇಶವಿಲ್ಲದ ಪ್ರಕಟಣೆಗಳು ಎಂದು ಅರ್ಥೈಸುವುದು ಬೇಡ.

ಸ್ವಾತಂತ್ರ್ಯೂತ್ತರ ಕಾಲದಲ್ಲಿದ್ದಂತಹ ಆದರ್ಶ, ಧ್ಯೇಯಗಳಿಗಾಗಿಯೇ ಹೋರಾಡಿದ ಪತ್ರಿಕೆಗಳನ್ನು ಇವತ್ತು ನಿರೀಕ್ಷಿಸುವುದೇ ತಪ್ಪು ಅಂತ ಹೇಳುತ್ತಿಲ್ಲ. ಆದರೆ ಸ್ವಾತಂತ್ರ್ಯ ಪೂರ್ವದಲ್ಲಿದ್ದಂತಹ ಹೋರಾಟದ ಕಿಚ್ಚು ಇವತ್ತು ಇಡೀ ಭಾರತೀಯ ಸಮಾಜದಲ್ಲಿಯೇ ಸತ್ತುಹೋಗಿದೆ. ಇಡೀ ಸಮಾಜದಲ್ಲಿಯೇ ಸತ್ತುಹೋಗಿರುವ ಕಿಚ್ಚನ್ನು ಕೇವಲ ಪತ್ರಕರ್ತರಲ್ಲಿ ಮಾತ್ರ ನಿರೀಕ್ಷಿಸುವ, ಉಳಿದವರಿಂದ ಆ ಕೆಚ್ಚನ್ನು ನಿರೀಕ್ಷಿಸದೆ ಇರುವ ಇಬ್ಬಂದಿತನ ಬೇಡ.

ಇಲ್ಲ, ಪತ್ರಕರ್ತ ಸದಾ ಪ್ರಭುತ್ವವನ್ನು ಪ್ರಶ್ನಿಸುತ್ತ, ಅದರ ಕಾರ್ಯವೈಖರಿಯನ್ನು ವಿಮರ್ಶಿಸುತ್ತಿರಬೇಕು ಎನ್ನುವುದಾದರೆ ಪ್ರಭುತ್ವದಿಂದ ಎದುರಾಗುವ ಸವಾಲುಗಳನ್ನು ಮೆಟ್ಟಿನಿಲ್ಲುವಂತಹ ಸಾಂವಿಧಾನಿಕ ರಕ್ಷಣೆಯನ್ನು ಪತ್ರಕರ್ತರಿಗೆ ನೀಡುವವರು ಯಾರು ಎಂಬ ಬಗ್ಗೆ ಚರ್ಚೆ ನಡೆಯಲಿ.
READ MORE - ಆದರ್ಶ, ಪತ್ರಕರ್ತ ಮತ್ತು ಸಾಂವಿಧಾನಿಕ ಮಿತಿಗಳು

Discovering the spirit of patriotism

Friday, November 20, 2009


Patriotism’ is a fascinating word for youth of any country. For this word fills in them a zeal to serve the nation with utmost commitment and dedication. A Patriot is defined in a dictionary as a person devoted to the duty of defending the country’. Hence ‘patriotism’ is related with the act of defending one’s country when the time necessitates.

But the youth of Coastal Karnataka are discovering and redefining the spirit of patriotism. “We emphasise a lot on defending our country, when attacked by enemy. But we often forget the fact that waging a war against rampant corruption too is as important as disarming the enemy” says Prakash G R, a student of MSW at SDM College in Ujire. Waging a war against the enemy in the battlefield alone is not patriotism. ``Grabbing initiatives to eradicate social evils is also an act of patriotism,'' he insists.

Sanskrit lecturer in Bhandarkar’s College, Kundapur, Prasanna Kumar Aithal express opinions in a similar vein. “This nation belongs to us. We must develop a concern for this land of sages and saints. This concern will prompt us to work for the country rather than working for self. “Let there be no doubt that the soldiers braving bullets fired by the enemy is an extraordinary act of patriotism. But, becoming a soldier is not the only way to express patriotism,’’ he believes.
The love for their motherland which compels individuals to protect and preserve land, rivers, forests, natural resources is patriotism, according to me, the lecturer adds. Every inch of this land belongs to us. This nature is ours. Every individual on this land is my brother/friend. This is the true spirit of patriotism. The obnoxious attitude that refuses to accept the poorest of the poor as our own is not patriotism” Rohinaksha Shirlalu, Kannada lecturer at Vivekananda College in Puttur Rohinaksha Shiralu asserts .

However, many youth are still discovering the spirit of patriotism. “Defending the country when the enemy attacks us is patriotism” says a post graduation student while another PG student is of the opinion that just loving your country is sign of patriotism”. Another student ,informs that patriotism cannot be defined.

Aithal adds. The British during their rule in India were the common enemy to every patriotic in this country. But as the country secured independence, the common enemy was vanquished and found a new enemy in the form of Pakistan. A surprising fact is that the organisations that raise their voice against poor infrastructure are not being recognised by masses as patriots. Those who protest against deforestation, corruption, casteism aren’t yet referred as ‘patriots’. However, the intensity of their work is no less compared to a popular patriot.

When the nation is rejoicing its 62nd independence day it is the time for all of us to be patriotic and make ourselves clear on what patriotism actually is. Some can never become soldiers due to many factors. For those who cannot join the armed forces and show their patriotism, practicing the ideals propounded in the Constitution of India in both letter and spirit is certainly a true and simplest way to be patriotic!
Author is a student of Journalism and Mass Communication | joshi.viju@gmail.com
READ MORE - Discovering the spirit of patriotism

ಮೂಲಗಳೇ ಎಲ್ಲಕ್ಕೂ ಮೂಲ!

Thursday, November 19, 2009

ವಿನಾಯಕ ಭಟ್ ಕ್ರೈ ವರದಿಗಾರಿಕೆ ಸರಣಿಯ ಎರಡನೇ ಲೇಖನವನ್ನು ಬರೆದಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಪ್ರಶ್ನೆಗಳಿದ್ದರೆ ನಮ್ಮ fivewoneh2009@gmail.com ಗೆ ಕಳುಹಿಸಬಹುದು.

ಸುದ್ದಿಮೂಲಗಳು ಎಲ್ಲ ಪತ್ರಕರ್ತನಿಗೂ ಅಗತ್ಯ. ಆದರೆ ಕ್ರೈಂ ವರದಿಗಾರನಿಗೆ ಮೂಲಗಳೇ ಜೀವಾಳ. ಘಟನೆ ನಡೆದ ಮಾಹಿತಿಯಿಂದ ಆರಂಭಿಸಿ, ನಿಮ್ಮ ವರದಿಯ ಹೂರಣವೆಲ್ಲ ಮೂಲಗಳ ಮೂಲಕವೇ ತಿಳಿದುಬರಬೇಕು.

ಹಿಂದಿನ ಲೇಖನದಲ್ಲಿ ಹೇಳಿದಂತೆ ಯಾರೂ ನಿಮ್ಮನ್ನು ಅಪರಾಧ ವರದಿಗಾಗಿ ಕರೆಯುವುದಿಲ್ಲ. ಹೀಗಾಗಿ ಏನೇ ಸುದ್ದಿ ಬರಬೇಕಾದರೂ ನಿಮಗೆ ಮೂಲಗಳೇ ಆಧಾರ. ಬೇರಾವುದೇ ಸುದ್ದಿ ಸ್ವಲ್ಪ ತಡವಾಗಿ ಬಂದರೂ ಆಗಬಹುದು. ಆದರೆ ಕ್ರೈಂ ಸುದ್ದಿ ನಿಮಗೆ ಎಷ್ಟು ಸಾದ್ಯವೋ ಅಷ್ಟು ಬೇಗ ನಿಮಗೆ ಗೊತ್ತಾಗಬೇಕು. ಮೊದಲೇ ಬಂದರೆ ಉತ್ತಮ!!

ಕೊಲೆ, ಅನುಮಾನಾಸ್ಪದ ಸಾವು, ಅಪಘಾತ ಇವುಗಳ ಸುದ್ದಿ ನಿಮಗೆ ಬೇಗ ಗೊತ್ತಾಗಬೇಕು. ಅದನ್ನು ಆಧರಿಸಿ ನೀವು ಅಥವಾ ನಿಮ್ಮ ಫೋಟೋಗ್ರಾಫರ್ ಸ್ಥಳಕ್ಕೆ ತಲುಪಬೇಕು. ಅಂದರೆ ಮಾತ್ರ ನಿಮಗೆ ಉತ್ತಮ ಚಿತ್ರ ಲಭಿಸಲು ಸಾದ್ಯ. ವರದಿಗಾರ ಕೂಡ ಎಷ್ಟು ಮೊದಲು ಸ್ಥಳಕ್ಕೆ ತಲುಪುತ್ತಾನೋ ಅಷ್ಟು ಒಳ್ಳೆಯದು. ಅಂದಾಗ ಮಾತ್ರ ಅಲ್ಲಿನ ನಿಜ ಸ್ಥಿತಿ ಅರಿಯಲು ಸಾದ್ಯ.

ನೀವು ಸ್ಥಳಕ್ಕೆ ಮೊದಲೇ ತಲುಪಿದರೆ ಅಲ್ಲಿ ಏನಾಯಿತು, ಕೊಲೆ, ಕಳ್ಳತನ, ಅಪಘಾತ ಹೇಗೆ ನಡೆದಿರಬಹುದು? ಅದರ ನಂತರ ಪೊಲೀಸರು ಎಷ್ಟು ಬೇಗ ಬಂದರು? ಬಂದು ಏನು ಮಾಡಿದರು? ಇದನ್ನೆಲ್ಲ ನೀವು ತಿಳಿದುಕೊಳ್ಳಲು, ನೋಡಲು ಸಾದ್ಯ. ನನ್ನ ಅನುಭವದ ಪ್ರಕಾರ ನೀವು ಅಪರಾಧ ಘಟಿಸಿದ ಸ್ಥಳಕ್ಕೆ ಭೇಟಿ ನೀಡಿದರೆ, ಭೇಟಿ ನೀಡದ ಬೇರೆ ಪತ್ರಿಕೆಯ ವರದಿಗಾರನಿಗಿಂತ ಖಂಡಿತವಾಗಿಯೂ ಉತ್ತಮ ವರದಿ ಬರೆಯಬಲ್ಲಿರಿ.

ಇನ್ನೊಂದು ವಿಷಯ ನೆನಪಿಟ್ಟುಕೊಳ್ಳಬೇಕು. ಕ್ರೈಂ ಸುದ್ದಿ ಮೂಲಗಳು ದೊರೆಯಬೇಕಾದರೆ ನೀವು ಅವರೊಂದಿಗೆ ಉತ್ತಮ ಭಾಂದವ್ಯ, ಗೆಳೆತನ ಹೊಂದಿರಬೇಕು. ಹಲವಾರು ಸಂದರ್ಭದಲ್ಲಿ ವ್ಯಕ್ತಿಯೊಬ್ಬನ ಬಗ್ಗೆ ಇತರಿಗಿರುವ ದ್ವೇಷವೇ ಸುದ್ದಿ ನೀಡಲು ಕಾರಣವಾಗಿರುತ್ತದೆ. ಆದರೆ ಕ್ರೈಂನಲ್ಲಿ ಅಂತಹ ಅವಕಾಶಗಳು ಕಡಿಮೆ. ಕಳ್ಳನೋ, ಕೊಲೆಗಾರನೋ, ಅಪಘಾತದ ಬಗ್ಗೆಯೋ ಪತ್ರಕರ್ತರಿಗೆ ಮಾಹಿತಿಕೊಟ್ಟು ಪೊಲೀಸರಿಗೆ ಆಗಬೇಕಾಗಿದ್ದೇನು? ಆದರೂ ಅವರು ನಿಮಗೆ ಅವರು ಸುದ್ದಿ ಕೊಡಬೇಕೆಂದರೆ ನಿಮ್ಮ ಅವರ ನಡುವೆ ಅಷ್ಟೊಳ್ಳೆ ಸಾಂಪರ್ಕ ಇರಬೇಕು. ಪ್ರತಿ ಮನುಷ್ಯನಿಗೂ ತನಗೆ ಗೊತ್ತಿರುವುದನ್ನು, ಅದರಲ್ಲೂ ವಿಶೇಷವಾಗಿ ತನಗೊಬ್ಬನಿಗೇ ಅಥವಾ ಕಡಿಮೆ ಜನರಿಗೆ ಗೊತ್ತಿರುವುದನ್ನು ಯಾರಿಗಾದರೂ ಹೇಳಬೇಕು ಎಂಬ ತವಕ ಇದ್ದೇ ಇರುತ್ತದೆ. ಅದನ್ನು ನೀವು ಬಳಸಿಕೊಳ್ಳಬಹುದು. ಹಾಗೆ ಯಾವುದೇ ಸುದ್ದಿಯನ್ನು ಯಾರಿಗಾದರೂ ಹೇಳಬೇಕು ಅಂತ ಯಾವುದೇ ಪೊಲೀಸನಿಗೆ ಅನ್ನಿಸಿದಾಗ, ಆತನಿಗೆ ನಿಮ್ಮ ನೆನಪಾಗಬೇಕು.

ಹೀಗಾಗಬೇಕಾದರೆ ನೀವು ಅವನೊಂದಿಗೆ ನಿರಂತರ ಸಂಪರ್ಕದಲ್ಲಿರಬೇಕು. ಒಳ್ಳೆಯ ಗೆಳೆತನ ಬೆಳೆಸಿರಬೇಕು. ಎಷ್ಟೋ ಬಾರಿ ಇಂತಹ ಗೆಳೆತನದ ಪರಿಣಾಮ ನಿಮಗೆ ಎಷ್ಟೋ ಸುದ್ದಿಗಳು ಗೊತ್ತಾಗಬಹುದು. ಆದರೆ ಎಲ್ಲದನ್ನೂ ಪ್ರಕಟಿಸುತ್ತೇನೆಂಬ ಹುಚ್ಚುತನ ಬೇಡ. ಸುದ್ದಿ ಕೊಟ್ಟವರ ಬಗ್ಗೆ ಕಾಳಜಿ ಹಾಗೂ ಅವರ ನಂಬಿಕೆ ಉಳಿಸಿಕೊಳ್ಳುವುದು ನಿಮ್ಮ ಜವಾಬ್ದಾರಿ. ಒಂದು ದಿನ ನೀವು ಹೀಗೆ ಅವರು ಹೇಳಿದ್ದನ್ನೆಲ್ಲ ಬರೆದುಬಿಡಬಹುದು. ಆದರೆ ಮುಂದೆ ಅವರಿಂದ ನಿಮಗೆ ಸುದ್ದಿ ಸಿಗುವುದಿಲ್ಲ ಎಂಬುದನ್ನು ನೆನಪಿಟ್ಟಿರಿ.

ಅಪರಾಧ ಸಂಭವಿಸಿದ ತಕ್ಷಣ ಸ್ಥಳಕ್ಕೆ ಧಾವಿಸುವ ಎಲ್ಲ ವರದಿಗಾರರೂ ಉತ್ತಮ ಕ್ರೈಂ ವರದಿಗಾರರಾಗಲಾರರು. ಸ್ಥಳದಲ್ಲಿ ಸಿಕ್ಕ ಮಾಹಿತಿ ಶೇ.೫೦ರಷ್ಟಾದರೆ ತನಿಖಾಧಿಕಾರಿ ಅಥವಾ ಪೊಲೀಸರಿಂದ ಪಡೆದ ಮಾಹಿತಿ ಮಾತ್ರ ನಿಮ್ಮ ವರದಿಯನ್ನು ಗಟ್ಟಿಗೊಳಿಸಬಲ್ಲದು. ಅದಕ್ಕೆ ಪೊಲೀಸರ ನಿಕಟ ಸಂಪರ್ಕ ಅಗತ್ಯ. ಅದಕ್ಕಾಗಿ ನೀವು ಸಮಯವಿದ್ದಾಗ ಪೊಲೀಸ್ ಅಧಿಕಾರಿಗಳ ಜೊತೆ ಹರಟುವುದು ರೂಢಿಸಿಕೊಂಡರೆ ಉತ್ತಮ.

ಈ ಹರಟೆಯಿಂದ ೨ ಲಾಭವಿದೆ. ಮೊದಲೆಯದಾಗಿ ನಿಮ್ಮ ಅವರ ಆಪ್ತತೆ ಹೆಚ್ಚುತ್ತದೆ. ೨ನೇಯದಾಗಿ ಮಾತಿನ ನಡುವೆ ಕೆಲವು ಹೊಸ ವಿಷಯಗಳು ಸಿಗುತ್ತವೆ. ಆಪ್ತರಾಗಿದ್ದರೆ ಸಹಜವಾಗಿ ನೀವು ಕರೆ ಮಾಡಿದಾಗ ಇತರರಿಗೆ ಕೊಟ್ಟಿದ್ದಕ್ಕಿಂತ ಹೆಚ್ಚು ಮಾಹಿತಿ ನಿಮಗೆ ಸಿಕ್ಕೇ ಸಿಗುತ್ತದೆ.

ಎಷ್ಟೇ ಗೆಳೆಯರಾಗಿರಲಿ. ಪೊಲೀಸರು ಎಷ್ಟು ಮಾಹಿತಿ ಕೊಡಬೇಕೋ ಅಷ್ಟೇ ಮಾಹಿತಿ ಕೊಡುತ್ತಾರೆ. ಹಾಗಾಗಿ ನೀವು ೨-೩ ಮೂಲಗಳನ್ನು ಹೊಂದಿರಬೇಕಾದ್ದು ಅನಿವಾರ್ಯ, ಐಜಿ, ಎಸ್ಪಿಯಿಂದ ಆರಂಭಿಸಿ, ಕಾನ್‌ಸ್ಟೆಬಲ್, ಅಧಿಕಾರಿಗಳ ಚಾಲಕರು ಕೂಡ ನಿಮ್ಮ ಮೂಲಗಳ ಪಟ್ಟಿಯಲ್ಲಿದ್ದರೆ ಮಾತ್ರ ನೀವು ಬಚಾವ್!

ಅಧಿಕಾರಿ ಎಷ್ಟೇ ಆಪ್ತನಾಗಿದ್ದರೂ ಅವರ ಠಾಣೆ ವ್ಯಾಪ್ತಿಯಲ್ಲಾದ ಅಪರಾಧ ಘಟನೆಗಳನ್ನು ನಿಮಗೆ ಆತ ಹೇಳುವುದೇ ಇಲ್ಲ. ಅಂತಹ ಸಂದರ್ಭದಲ್ಲಿ ನಿಮಗೆ ಸಹಾಯಕ್ಕೆ ಬರುವುದು ಪೊಲೀಸ್ ನಿಯಂತ್ರಣ ಕೊಠಡಿ. ಅಲ್ಲಿ ಕೆಲಸ ಮಾಡುವವರು ನಿಮ್ಮ ಸುದ್ದಿ ಮೂಲಗಳಾಬಿಟ್ಟರೆ ನಿಮ್ಮಷ್ಟು ಸುಖಿ ಕ್ರೈಂ ವರದಿಗಾರ ಇನ್ನೊಬ್ಬನಿಲ್ಲ. ಪೊಲೀಸ್ ನಿಯಂತ್ರಣ ಕೊಠಡಿಗೆ ಎಲ್ಲ ಕಡೆಯ ಸುದ್ದಿಗಳು ಕ್ಷಣ ಕ್ಷಣಕ್ಕೆ ಬರುತ್ತಿರುತ್ತದೆ. ಅಲ್ಲಿ ಕೆಲಸ ಮಾಡುವವರು ನಿಮ್ಮ ಸುದ್ದಿ ಮೂಲವಾಗಿದ್ದರೆ ನಿಮಗೇ ಮೊದಲು ಸುದ್ದಿ ಸಿಗುವುದು ಗ್ಯಾರಂಟಿ.

ಆದರೆ ಅಪರಾಧಿಗಳನ್ನು ಬಂಧಿಸಿದ್ದು, ಎಲ್ಲೋ ದಾಳಿ ನಡೆದಿದ್ದು ಮುಂತಾದ ಸುದ್ದಿಗೆ ನಿಯಂತ್ರಣ ಕೊಠಡಿ ಮೂಲಗಳು ಕೆಲಸಕ್ಕೆ ಬರುವುದಿಲ್ಲ. ಅದಕ್ಕೆ ನೀವು ಠಾಣೆಗಳಲ್ಲಿರುವ ಪೊಲೀಸರನ್ನೇ ಅವಲಂಬಿಸಬೇಕಾಗುತ್ತದೆ.

ಸುದ್ದಿಮೂಲಗಳ ಗೌಪ್ಯ, ನಂಬಿಕೆ ಕಾಪಾಡಬೇಕೆಂಬುದು ಪತ್ರಕರ್ತನ ಮೂಲಮಂತ್ರ. ಅದು ಕ್ರೈಂ ವರದಿಯಲ್ಲಿ ಇತರ ಕ್ಷೇತ್ರಗಳಿಗಿಂತ ಹೆಚ್ಚು.

ಸುದ್ದಿ ಸಿಗಬೇಕೆಂದಾದರೆ ಪೊಲೀಸರೊಟ್ಟಿಗೆ ಉತ್ತಮ ಸಂಬಂಧ, ಗೆಳೆತನ ಇರಬೇಕು. ಹಾಗಾದರೆ ಅವರ ಬಗ್ಗೆ ಬರೆಯದೆ ಸುಮ್ಮನಿರಬೇಕೆ? ಎಂದು ನೀವು ಕೇಳಬಹುದು. ಹಾಗೇನಿಲ್ಲ. ನೀವು ಪ್ರಾಮಾಣಿಕರೂ, ನಿಷ್ಟಾವಂತರೂ ಆಗಿದ್ದರೆ ನೀವು ಅವರ ವಿರುದ್ಧ ಬರೆದೂ, ಸುದ್ದಿ ಪಡೆಯಬಹುದು. ಆದರೆ ನೀವು ಪೊಲೀಸರ ಬಳಿ ಏನಾದರೂ ಕೆಲಸ ಮಾಡಿಸಿಕೊಂಡು, ನಂತರ ಅವರ ವಿರುದ್ಧ ಬರೆಯಲು ಹೋದರೆ ಬಣ್ಣಗೆಟ್ಟೀತು. ನೀವು ನಿಷ್ಟಾವಂತರಾಗಿದ್ದರೆ, ನೀವು ಬರೆದಿದ್ದು ಸರಿಯಾಗಿದ್ದರೆ ಅವರು ಸಹಜವಾಗಿ ಅದನ್ನು ಒಪ್ಪಿಕೊಳ್ಳುತ್ತಾರೆ. ತಪ್ಪಿದ್ದಾಗ ತಪ್ಪೆಂದು, ಸರಿಯಿದ್ದಾಗ ಸರಿಯೆಂದು ಬರೆದರೆ ಆಗ ಯಾರೂ ಬೇಸರ ಮಾಡಿಕೊಳ್ಳುವುದಿಲ್ಲ. ಅನಗತ್ಯವಾಗಿ ನಿಮ್ಮ ಮೇಲೆ ಕೋಪ ಮಾಡಿಕೊಂಡು, ಸೇಡು ತೀರಿಸಲು ಕಾಯುವುದಿಲ್ಲ. ಆದರೆ ವಯಕ್ತಿಕ ಕಾರಣಕ್ಕಾಗಿ ನೀವು ಅವರನ್ನು ಸುಮ್ಮ ಸುಮ್ಮನೆ ನಿಂದಿಸ ಹೊರಟರೆ ಪರಿಸ್ಥಿತಿ ಕೈಮೀರಿದರೂ ಮೀರಬಹುದು. ಅಂತಹ ಹಲವಾರು ಘಟನೆಗಳು ನಡೆದಿವೆ. ಆ ಹಂತಕ್ಕೆ ಹೋಗದಿರಿ.
READ MORE - ಮೂಲಗಳೇ ಎಲ್ಲಕ್ಕೂ ಮೂಲ!

ಸುದ್ದಿ ಮೂಲ ಹೇಗೆ ಹುಡುಕುತ್ತೀರಿ?

Tuesday, November 17, 2009

ಸುದ್ದಿ ಮೂಲ ಹೇಗೆ ಹುಡುಕುತ್ತೀರಿ ? ಮತ್ತು ಅದರ ಸತ್ಯಾಸತ್ಯತೆಗಳನ್ನು ಹೇಗೆ ಶೋಧಿಸುತ್ತೀರಿ ?
ಪ್ರತಿ ವರದಿಗಾರನಿಗೂ ಬೀಟ್ ಎಂದು ಇರುವುದು ಸಾಮಾನ್ಯ ; ಪೊಲೀಸರಿಗೆ ಇದ್ದ ಹಾಗೆಯೇ. ದಿನ ಪತ್ರಿಕೆಯ ಕೆಲಸಕ್ಕೂ, ವಾರಪತ್ರಿಕೆ ಇತ್ಯಾದಿಗೂ ಬಹಳ ವ್ಯತ್ಯಾಸವಿದೆ. ಅದರಲ್ಲೂ ಇತ್ತೀಚೆಗೆ ಹೆಚ್ಚುತ್ತಿರುವ ಸುದ್ದಿ ಪೈಪೋಟಿಯ ಹಿನ್ನೆಲೆಯಲ್ಲಿ ವರದಿಗಾರರ ದಿನಚರಿಯೇ ಬದಲಾಗಿ ಹೋಗಿದೆ.

ಬಹಳ ಪ್ರಮುಖ ವಿಷಯಗಳನ್ನು ಆಧರಿಸಿ ಬೀಟ್ ಎಂದು ಹಂಚಲಾಗುತ್ತದೆ. ಉದಾಹರಣೆಗೆ ಅಪರಾಧ ವಿಭಾಗವನ್ನು ಒಬ್ಬ ನೋಡಿಕೊಂಡರೆ, ಮತ್ತೊಬ್ಬನಿಗೆ ರಾಜಕೀಯ ಬೆಳವಣಿಗೆಗಳ ನಿರ್ವಹಣೆ, ಶಿಕ್ಷಣ, ಆರೋಗ್ಯ- ಹೀಗೆ ಹಂಚಲಾಗುತ್ತದೆ. ಈ ಕ್ಷೇತ್ರಗಳಲ್ಲಿ ಆಗುವ ಬೆಳವಣಿಗೆಗಳ ಮೇಲೆ ನಿಗಾ ಇಟ್ಟು ವರದಿ ಮಾಡಬೇಕು. ಬೇರೆ ಪೇಪರ್‍ನಲ್ಲಿ ಸುದ್ದಿ ಬಂದರೆ ಅದು ನಮಗೆ ಮಿಸ್ ಆದಂತೆ. ಅದಕ್ಕೆ ನಾವು ಉತ್ತರಿಸಬೇಕು.
ಹೀಗೆ ಆಯಾ ವರದಿಗಾರರು ತಮಗೆ ಸಂಬಂಧಪಟ್ಟ ಕ್ಷೇತ್ರಗಳಲ್ಲಿ ಸುದ್ದಿ ಮೂಲಗಳನ್ನು ಹುಡುಕಿಕೊಳ್ಳುತ್ತಾರೆ. ಸಾಮಾನ್ಯವಾಗಿ ಪ್ರತಿ ವರದಿಗಾರರು ಹಲವು ವಲಯಗಳಲ್ಲಿ ಸುದ್ದಿ ಮೂಲಗಳನ್ನು ಸೃಷ್ಟಿಸಿಕೊಂಡಿರುತ್ತಾರೆ. ಇಲ್ಲಿ ಯಾರನ್ನೂ ಉಪೇಕ್ಷಿಸುವಂತಿಲ್ಲ. ಗುಮಾಸ್ತನಿಂದ ಹಿಡಿದು ಉನ್ನತ ಅಧಿಕಾರಿವರೆಗೂ ವಿವಿಧ ಹಂತಗಳ ಸುದ್ದಿಮೂಲಗಳು.

ಸುದ್ದಿಯ ವಾಸನೆ ಸಿಗುವುದು ಕೆಳ ಹಂತದ ಅಧಿಕಾರಿಗಳಿಂದ. ಅದು ಕನ್‌ಫರ್ಮ್ ಆಗುವುದು ಉನ್ನತ ಅಧಿಕಾರಿಗಳಿಂದ. ಆದ್ದರಿಂದ ನಮ್ಮ ಸುದ್ದಿ ಮೂಲಗಳನ್ನು ಚೆನ್ನಾಗಿ (ಅಂದರೆ ತಿಂಡಿ ಕೊಡಿಸಿ, ಹಣ ಕೊಡಿಸಿಯಲ್ಲ) ವಿಶ್ವಾಸದಿಂದ ಇಟ್ಟುಕೊಳ್ಳಬೇಕು. ಇದು ಬರಿಯ ಅಧಿಕಾರಿಗಳೆಂದೇ ಅಲ್ಲ. ಸುದ್ದಿ ಮೂಲಗಳು ಪ್ರತಿ ವಿಷಯಕ್ಕೂ ಸಂಬಂಧಿಸಿ ಬದಲಾಗುತ್ತಾ ಹೋಗುತ್ತದೆ.

ಎರಡನೆಯದಾಗಿ ನಮ್ಮ ಸುದ್ದಿ ಮೂಲಗಳ ಸತ್ಯಾಸತ್ಯತೆಗಳನ್ನು ಶೋಧಿಸುವ ಬಗೆ. ಇದು ಸಂಪೂರ್ಣ ವಿಶ್ವಾಸದ ನೆಲೆಯಲ್ಲಿ ನಡೆಯುವಂಥದ್ದು. ನಾವೂ ಸಹ ಕೊಟ್ಟದ್ದನ್ನೆಲ್ಲಾ ಸುದ್ದಿಗಳೆಂದು ಬರೆಯುವುದಿಲ್ಲ. ಅದನ್ನು ಬೆನ್ನು ಹತ್ತಿ ಅದರ ವಿವಿಧ ನೆಲೆಗಳನ್ನು ಶೋಧಿಸುತ್ತೇವೆ. ನಂತರ ನಮಗೆ ವಿಶ್ವಾಸ ಮೂಡಿದ್ದಲ್ಲಿ ಮಾತ್ರ ನಮ್ಮ ಮುಖ್ಯ ವರದಿಗಾರರಿಗೆ, ಸಂಪಾದಕರಿಗೆ ಇಂಥದೊಂದು ಸುದ್ದಿಯಿದೆ ಎಂಬ ಗುಟ್ಟು ಬಿಟ್ಟುಕೊಡುತ್ತೇವೆ. ಅಲ್ಲಿಯವರೆಗೆ ಆ ಕುರಿತು ಏನನ್ನೂ ಹೇಳುವುದಿಲ್ಲ. “ಕ್ರಾಸ್ ಚೆಕ್’ ಎಂಬುದು ನಮ್ಮ ಜನ್ಮ ಸಿದ್ಧ ಹಕ್ಕು ಎಂದರೆ ತಪ್ಪೇನೂ ಇಲ್ಲ. ಅದಿಲ್ಲದೇ ನಾವು ಮುಂದುವರಿಯುವುದಿಲ್ಲ. ಕೆಲವೊಮ್ಮೆ ಇಷ್ಟೆಲ್ಲಾ ಆದ ಮೇಲೂ ಎಡವಿದ್ದು ಇದೆ ; ಅದು ಸಾಮಾನ್ಯ.
READ MORE - ಸುದ್ದಿ ಮೂಲ ಹೇಗೆ ಹುಡುಕುತ್ತೀರಿ?

ವರದಿಗಾರನಿಗೆ ಸಾಮಾನ್ಯ ಜ್ಞಾನ ಇರಲೇ ಬೇಕು

Saturday, November 14, 2009

ವರದಿಗಾರಿಕೆ ಅತ್ಯಂತ ಕುತೂಹಲವಾದದ್ದು. ಜತೆಗೆ ಜನರೊಂದಿಗೆ ನಿತ್ಯವೂ ನಮ್ಮನ್ನು ಸಂಪರ್ಕವಿಡುವಂಥದ್ದು. ನನಗೂ ಮೊದಲು ವರದಿಗಾರಿಕೆಗೆ ಹೋದಾಗ ಸಹಜವಾಗಿ ಭಯವಾಗಿತ್ತು. ಅದನ್ನು ನಾನು ನನ್ನ “ಬ್ರಹ್ಮಚಾರಿಗಳ ಪುಟಗಳು’ ಬ್ಲಾಗಿನಲ್ಲಿನ ಧಾರಾವಾಹಿಯಲ್ಲಿ ಹೇಳಿಕೊಂಡಿದ್ದೆ.
ವರದಿಗಾರಿಕೆ ಮಾಡುವುದು ಎಲ್ಲರೂ ತಿಳಿದಂತೆ ಕಷ್ಟವಲ್ಲ. ಮೊನ್ನೆ ಒಬ್ಬರು ಇಂಟರ್ನ್‌ಶಿಪ್‌ಗೆ ಬಂದಿದ್ದ ಪತ್ರಿಕೋದ್ಯಮ ವಿದ್ಯಾರ್ಥಿಯ ಬಳಿ ಈ ಬಗ್ಗೆ ಸುಮಾರು ಹೊತ್ತು ಮಾತನಾಡಿದೆ. ಬಹಳಷ್ಟು ಬಾರಿ ಅನಿಸುವ ಸಂಗತಿಯೆಂದರೆ ( ಇದು ಎಲ್ಲರಿಗೂ ಇಷ್ಟವಾಗದಿರಬಹುದು) ವರದಿಗಾರಿಕೆಗಾಗಲೀ, ಸುದ್ದಿ ಸಂಪಾದನೆ (ಎಡಿಟಿಂಗ್) ಗಾಗಲೀ “ಸಾಮಾನ್ಯ ಜ್ಞಾನ’ (ಕಾಮನ್ ಸೆನ್ಸ್) ಅತ್ಯವಶ್ಯ. ಇದರರ್ಥ ವಿಶೇಷ ಜ್ಞಾನ, ಪರಿಣತಿ ಇರಬಾರದೆಂದಲ್ಲ. ಇದ್ದರೆ ಅದು ಪೂರಕ (ಸಪ್ಲಿಮೆಂಟ್). ಆದರೆ ಮೂಲವಾದುದು ಸಾಮಾನ್ಯಜ್ಞಾನ. ಇಂಟೆಲ್‌ಕ್ಚುಯಲಿಟಿಯಿಂದ ಇಲ್ಲಿ ಪ್ರಯೋಜನ ಕಡಿಮೆ.

ವರದಿಗಾರಿಕೆ ಮಾಡುವವರಿಗೆ ಮೊದಲು ನಿತ್ಯದ ಬೆಳವಣಿಗೆಗಳ ಅರಿವಿರಬೇಕು. ಹಾಗೆಯೇ ಪ್ರತಿ ಬೆಳವಣಿಗೆಗಳ ಭವಿಷ್ಯವನ್ನು ಅಂದಾಜು ಮಾಡುವ ಸಾಮರ್ಥ್ಯ ಇರಬೇಕು. ಉದಾಹರಣೆಗೆ ರಾಜ್ಯಾದ್ಯಂತ ನಾಳೆಯಿಂದ ಬೆಳಗ್ಗೆ 9 ಕ್ಕೆ ಶಾಲೆ ಆರಂಭ. ಇದುವರೆಗೆ 9.30 ಕ್ಕೆ ಆರಂಭವಾಗುತ್ತಿತ್ತು ಎಂಬ ಶಿಕ್ಷಣ ಇಲಾಖೆ ಪ್ರಕಟಣೆಯನ್ನು ಇಟ್ಟುಕೊಂಡು ಅದರಿಂದುಂಟಾಗುವ ಸರಣಿ ಬೆಳವಣಿಗೆಗಳನ್ನು ಗ್ರಹಿಸಬೇಕು. ಇಂದಿನ ಪೋಷಕರು ತಮ್ಮ ಎಲ್ಲ ಚಟುವಟಿಕೆಗಳನ್ನು ಅರ್ಧ ಗಂಟೆ ಮುಂಚಿತವಾಗಿಯೇ ರೂಪಿಸಿಕೊಳ್ಳಬೇಕು. ಇದನ್ನು ಅರ್ಥವತ್ತಾಗಿ ಬರೆದರೆ ಒಂದು ಮಾನವೀಯ ವರದಿ.
ಹಾಗಾಗಿ ನಿತ್ಯ ಬೆಳವಣಿಗೆಗಳ ಪರಿಣಾಮ ಗ್ರಹಿಸುವ ಸಾಮರ್ಥ್ಯ ಅಗತ್ಯ. ಇದೇನೂ ಕಷ್ಟವಲ್ಲ. ನಿತ್ಯವೂ ರೂಢಿಸಿಕೊಂಡುಹೋಗುವಂಥದ್ದು.

* ವರದಿಗಾರಿಕೆಗೆ ಹೋಗುವ ಮೊದಲು ಸಂಬಂಧಪಟ್ಟ ಕಾರ್‍ಯಕ್ರಮದ ವಿಷಯದ ಬಗ್ಗೆ ಮೊದಲೇ ತಿಳಿದಿದ್ದರೆ ಅದಕ್ಕೆ ಸಂಬಂಧಿಸಿದ ಇತ್ತೀಚಿನ ಬೆಳವಣಿಗೆಗಳನ್ನು ತಿಳಿದು ಹೋಗಿ. ಇದರಿಂದ ಅಲ್ಲಿ ಚರ್ಚೆಯಾಗುವ ವಿಷಯ ಹೆಚ್ಚು ಸ್ಪಷ್ಟವಾಗುತ್ತದೆ.

* ನೀವು ಕಾರ್ಯಕ್ರಮದಲ್ಲಿ ಮಾತನಾಡುವುದನ್ನೆಲ್ಲಾ (ಮುಖ್ಯ ಸಂಗತಿ) ಬರೆದುಕೊಂಡು ಬನ್ನಿ. ಅನುಮಾನಗಳಿದ್ದರೆ ಸಂಬಂಧಪಟ್ಟ ಭಾಷಣಕಾರರನ್ನೇ ನಂತರ ಕೇಳಿ. ಇದರಿಂದ ಮರ್ಯಾದೆಯೇನೂ ಹೋಗುವುದಿಲ್ಲ. ಅಸ್ಪಷ್ಟ ಮತ್ತು ತಪ್ಪಾದ ಸಂಗತಿ ಬರೆದು ಎಲ್ಲರನ್ನೂ ದಾರಿ ತಪ್ಪಿಸುವುದಕ್ಕಿಂತ ನಮ್ಮ ಅನುಮಾನ ಬಗೆಹರಿಸಿಕೊಂಡು ಸರಿಯಾದುದನ್ನೇ ಬರೆಯುವುದು ಸರಿ.

* ನಂತರವೂ ಅನುಮಾನಗಳಿದ್ದರೆ ನಿಮ್ಮ ಹಿರಿಯರೊಂದಿಗೆ (ಕಚೇರಿಯಲ್ಲಿರುವ) ಚರ್ಚಿಸಿ. ಇಲ್ಲವಾದರೆ ಆ ಸಂಬಂಧಪಟ್ಟ ವಿಷಯತಜ್ಞರನ್ನು ಕೇಳಿ. ಒಟ್ಟೂ ವಿಷಯವನ್ನು ನಿಮ್ಮೊಳಗೆ ಮೊದಲು ಸ್ಪಷ್ಟಗೊಳಿಸಿಕೊಳ್ಳಿ. ಆಮೇಲೆ ಯಾವುದು ಹೆಚ್ಚು ಚರ್ಚಿತವಾಗಬಲ್ಲದೋ, ಸುದ್ದಿ ಎನಿಸಬಲ್ಲದೋ ಅದನ್ನು ಬರೆಯಿರಿ. ಯಾವಾಗಲೂ ಸರಣಿ ಘಟನೆಗಳು ಮುಖ್ಯ. ಉದಾಹರಣೆಗೆ ಲೋಕಾಯುಕ್ತರು ಗಣಿ ವರದಿಯನ್ನು ಶೀಘ್ರವೇ ಕೊಡುವುದಾಗಿ ಹೇಳುತ್ತಾರೆ. ಇದಕ್ಕೆ ಸಂಬಂಧಿಸಿದಂತೆ ಸರಕಾರವಾಗಲೀ, ಗಣಿ ಉದ್ದಿಮೆದಾರರಾಗಲೀ, ಅಧಿಕಾರಿಗಳಿಗಾಗಲೀ ಪ್ರತಿಕ್ರಿಯಿಸಿದರೆ ಅದು ಸುದ್ದಿ. ಇದನ್ನು ಸರಣಿ ಘಟನೆಗಳೆಂದು ಹೇಳಬಹುದು. ಇದೊಂದು ಉದಾಹರಣೆಯಷ್ಟೇ.

ಇನ್ನು ಸಂದರ್ಶನಕ್ಕೆ ಹೋಗುವಾಗ ಸಿದ್ಧವಾಗುವ ಬಗೆ ಹಾಗೂ ವರದಿಗಾರಿಕೆಯಲ್ಲಿ ಬರುವ ಮುಖ್ಯಾಂಶಗಳನ್ನು ಮತ್ತೊಮ್ಮೆ ಹೇಳುತ್ತೇನೆ. ಸುದ್ದಿ ಯಾವುದು ಎನ್ನುವ ಬಗ್ಗೆಯೇ ಕಲ್ಪನೆ ಬದಲಾಗಿರುವುದರಿಂದ ಪ್ರತ್ಯೇಕವಾಗಿ ಹೇಳುತ್ತೇನೆ.

ಋತುಪರ್ಣ
READ MORE - ವರದಿಗಾರನಿಗೆ ಸಾಮಾನ್ಯ ಜ್ಞಾನ ಇರಲೇ ಬೇಕು

Documentation: A Forgotten art

Wednesday, November 11, 2009


Harsha Rao shares a long forgotten secret with young journalists on how to overcome personal shortfalls like inexperience and poor memory, to produce best copies.


Celebrated writer Kushwant Singh had made it a habit of discouraging students who sought his advice on making a career in print journalism.

To the most determined student not discouraged by the talk on making a career in other fields, Kushwant Singh would finally give in advising the student to stack files in the order A to Z and then fill them up with articles of interest. For instance the file ‘A’ can have articles of interest on agriculture or aviation or about animals.

The compiling of articles in a manner that can be retrieved easily, is now a forgotten art. Once religiously followed by journalists of eminence, the documentation exercise has not been accorded the same priority by technology-savvy journalists. The exercise is disregarded, because its stellar role is hardly vouched in the class-room teaching.

Just as public memory is short, a journalist’s memory too is nothing to rave about (journalists like Manohar Prasad from Mangalore are an exception). It is this short memory, of journalists particularly, that emboldens politicians and elements on the wrong side of the law to get away with their tactless actions.

Lack of documentation lets milestones pass away, like it happened with Bantwal taluk in Mangalore whose 50th year went unnoticed. I have always held a belief that lack of documentation is sort of a betrayal to readers longing to stay connected with the past, in order to correct the faults of tomorrow.

I begun documentation right from the word go. I have clippings of every report, filed during my internship with The Hindu in Bangalore. I have a copy of my first ever by-line, published in Star of Mysore. After 13 years of Journalism, I nearly have 90 per cent of my by-line stories published in Morning News and The New Indian Express.

Based on my personal experience, let me vouch that I am reaping the benefits of my decade-long labour of love. I never considered myself as the best scoop-reporter or investigative reporter. But, my collection of articles has made me the best follow-up specialist reporter.

The documentation exercise in fact covers the many shortcomings in a reporter. Some Journalists stock articles digitally in the computers. Even I too had done it, assuming that one must change with time. But with the updating of software, I lost all my articles with it.

Thus East or West, physical compiling of articles is still the best and safest mode. A little time invested today not only saves a lot of trouble but also lets the conscience rest easy with a feeling that the readers have got more than what they had bargained for.
READ MORE - Documentation: A Forgotten art

ಪ್ರಶ್ನೆ ಕೇಳಿ-ಉತ್ತರ ಪಡೆಯಿರಿ

Tuesday, November 10, 2009

ಸಂವಾದ ಶುರುವಾಗಿದೆ. ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ನೆಲೆಯ ಮಾಹಿತಿ, ಜ್ಞಾನ ನೀಡಬೇಕೆಂದೇ ಈ ಬ್ಲಾಗ್ ಆರಂಭಿಸಿದ್ದು ನಿಮಗೆ ತಿಳಿದದ್ದೇ. ಈಗ ಪ್ರಶ್ನೆ-ಉತ್ತರ ಅಂಕಣ ಆರಂಭವಾಗಿದೆ.

ನೀವು ಪತ್ರಿಕೋದ್ಯಮಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನು ಕೇಳಬಹುದು. ವೈಯಕ್ತಿಕವಾಗಿ ಪ್ರಶ್ನೆಗಳಿದ್ದರೆ (ಅಂದರೆ ಯಾರಾದರೂ ಬಗ್ಗೆ) ಅವುಗಳಿಗೆ ಉತ್ತರಿಸುವುದಿಲ್ಲ. ಆದರೆ ಪತ್ರಿಕಾ ಮನೆಗಳಲ್ಲಿ, ಟಿವಿ ಕಚೇರಿಗಳಲ್ಲಿ ಕಾರ್ಯ ನಿರ್ವಹಣೆಗೆ ಸಂಬಂಧಿಸಿದಂತೆ, ಎದುರಾಗುವ ಸವಾಲುಗಳು ಇತ್ಯಾದಿ ವಿಷಯಗಳಿಗೆ ಸಂಬಂಧಿಸಿ ಪ್ರಶ್ನೆ ಕೇಳಬಹುದು.

ಪ್ರಶ್ನೆ ಕೇಳುವವರು ತಮ್ಮ ಹೆಸರು, ಕಾಲೇಜಿನ ಹೆಸರನ್ನು ಸ್ಪಷ್ಟವಾಗಿ ಹೇಳಲೇಬೇಕು. ನಿಮ್ಮ ಪ್ರಶ್ನೆಗಳಿಗೆ ಆಯಾ ಕ್ಷೇತ್ರದ ನುರಿತರೇ ಉತ್ತರಿಸುವರು. ನಮ್ಮದೇ ಆದ ತಂಡವೊಂದಿದ್ದು, ಅದು ನಿಮ್ಮ ಅನುಮಾನಗಳನ್ನು ಬಗೆಹರಿಸಲಿದೆ.

ನಿಮ್ಮ ಪ್ರಶ್ನೆಗಳನ್ನು fivewoneh2009@gmail.com ಗೆ ಕಳುಹಿಸಬಹುದು.
READ MORE - ಪ್ರಶ್ನೆ ಕೇಳಿ-ಉತ್ತರ ಪಡೆಯಿರಿ

ಪತ್ರಕರ್ತರಿಗೆ ತಾಳ್ಮೆ ಒಂದಿದ್ದರೆ...!

Monday, November 9, 2009


ಪುತ್ತೂರಿನ ವಿವೇಕಾನಂದ ಕಾಲೇಜಿನ ಪತ್ರಿಕೋದ್ಯಮ ವಿದ್ಯಾರ್ಥಿ ಸುಶಾಂತ್ ಬರೆದಿರುವ ಲೇಖನವಿದು. ಪತ್ರಕರ್ತರಿಗೂ ತಾಳ್ಮೆ ಇದ್ದರೆ ಚೆನ್ನ ಎನ್ನುತ್ತಾರೆ...!

ತ್ರಕರ್ತರ ಬಗ್ಗೆ ನಮ್ಮ ಕನ್ನಡ ಮಾಸ್ತರ್ ಸದಾ ಹೇಳುತ್ತಿದ್ದ ಮಾತೊಂದದು-ಪತ್ರಕರ್ತರಿಗೆ ತಾಳ್ಮೆಯೇ ಇಲ್ಲ. ಆ ... ಅವರನ್ನೇ ನೋಡು, ಈ ಇವರನ್ನೇ ನೋಡು. ಪತ್ರಕರ್ತನಾದ ಯಾರನ್ನೇ ನೋಡು. ಅವರ‍್ಯಾರಲ್ಲೂ ತಾಳ್ಮೆ ಎಂಬುದೇ ಇರದು’ ಎಂದು ತಮ್ಮ ತಾಳ್ಮೆ ಕಳಕೊಳ್ಳದೆ ಆರಾಮವಾಗಿ ಹೇಳುತ್ತಿದ್ದರು.

ಪತ್ರಕರ್ತರ ಬಗ್ಗೆ ಇಂಥ ಮಾತು ಹೊಸತಲ್ಲ. ನಮ್ಮಲ್ಲಿ ಬಹುತೇಕರು ಉದ್ಯಮಕ್ಕೆ ಅಗತ್ಯವಾದ ತಾಳ್ಮೆ ಎಂಬ ವಿಟಮಿನ್ ಕೊರತೆಯಿಂದ ಬಳಲುತ್ತಾರೆ. ಮತ್ತೂ ಕೆಲವರು ತಾಳ್ಮೆ ಎನ್ನುವುದು ನಿಧಾನ ಎಂಬ ಪದದ ಮತ್ತೊಂದು ಅರ್ಥ ಎಂದು ತಿಳಿದು ತಾಳ್ಮೆ ಇರದಿರುವುದೇ ತಮ್ಮ ಅರ್ಹತೆ ಎಂದುಕೊಳ್ಳುತ್ತಾರೆ.

ಯಾವುದಾದರೂ ಒಂದು ಕಾರ‍್ಯಕ್ರಮದಲ್ಲಿ ಗಮನಿಸಿ. ವೇದಿಕೆಯಲ್ಲಿ ಏನೇ ನಡೆಯುತ್ತಿರಲಿ, ಹೆಚ್ಚಿನವರು ತಮ್ಮ ವೃತ್ತಿ ಬಾಂಧವರ ಜತೆ ಮಾತನಾಡುತ್ತ, ನಗೆ ಚಟಾಕಿ ಹಾರಿಸುತ್ತಾ ಇರುತ್ತಾರೆ. ಕೆಲವರು ಆಗಾಗ್ಗೆ ಮೊಬೈಲು ಹಿಡಿದು ಹೊರಗೆ ಹೋಗಿ ಬರುವುದನ್ನು ಮಾಡುತ್ತಿರುತ್ತಾರೆ.

ಕಾರ‍್ಯಕ್ರಮಗಳಲ್ಲಷ್ಟೇ ಅಲ್ಲ, ಉಳಿದ ಕೆಲವೆಡೆಯೂ ಹಾಗೆಯೇ. ಅವರಿಗೆ ಒಂದು ವಿಷಯದ ಬಗ್ಗೆ ಅಧ್ಯಯನ ನಡೆಸಲು ಪುರುಸೊತ್ತಿಲ್ಲ. ಹಾಗಾಗಿಯೇ ಮನ್ನಾಡೇಯಂಥವರು ಪತ್ರಕರ್ತರನ್ನು ಒಂದೈದು ಗಜ ದೂರ ಇಡುತ್ತಿದ್ದರು. ಸಂದರ್ಶನಕ್ಕೆಂದು ಬರುವವರು ಸಂಗೀತದ ಬಗ್ಗೆ, ಹಾಡುಗಳ ಬಗ್ಗೆ ಸರಿಯಾಗಿ ಅರಿತಿರುವುದಿಲ್ಲ ಎಂಬುದೂ ಅವರ ದೂರು. ಎಚ್.ವೈ. ಶಾರದಾ ಪ್ರಸಾದರೂ ವಿಜಯ ಕರ್ನಾಟಕಕ್ಕೆ ಅಂಕಣ ಬರೆಯಲು ಒಪ್ಪಿಕೊಂಡದ್ದು ಸ್ವತಃ ತಾವೇ ಅನುವಾದ ಮಾಡುವುದಾಗಿ ಹೇಳಿದ ಮೇಲೆಯೇ ಎಂದು ವಿಶ್ವೇಶ್ವರ ಭಟ್ಟರೇ ಕಾಲ-ದೇಶದ ಮುನ್ನುಡಿಯಲ್ಲಿ ದಾಖಲಿಸಿದ್ದಾರೆ.

ಸುದ್ದಿ ವಾಹಿನಿಗಳ ಪತ್ರಕರ್ತರೂ ಹೀಗೆಯೇ. ಕ್ಷಣ ಕ್ಷಣದ ಮಾಹಿತಿಗಾಗಿ ಅವರು ಸಂಪರ್ಕಿಸುವ ವರದಿಗಾರರ ಮಾತನ್ನು ಒಮ್ಮೆ ಗಮನಿಸಿ. ವಾರ್ತಾ ವಾಚಕ ಪ್ರಸ್ತುತ ವಿದ್ಯಮಾನದ ಬಗ್ಗೆ ಒಂದಷ್ಟು ವಿಚಾರ ಪ್ರಸ್ತಾಪಿಸಿ ನಂತರದ ಬೆಳವಣಿಗೆಗಾಗಿ ವರದಿಗಾರನನ್ನು ಸಂಪರ್ಕಿಸುತ್ತಾನೆ. ಆದರೆ ಅದನ್ನು ಸರಿಯಾಗಿ ಕೇಳಿಕೊಳ್ಳದ ವರದಿಗಾರ ಪುನಾ ಅದೇ ಪೀಠಿಕೆ ಹಾಕುತ್ತಾನೆ. ಮತ್ತು ಅನಗತ್ಯವಾಗಿ ಇದು, ಇಂಥಾದ್ದು, ಈ ಒಂದು, ಈ ವಿಷಯ ಏನಿದೆಎಂಬ ಶಬ್ದಗಳನ್ನು ಪುನರುಚ್ಚರಿಸುತ್ತಿರುತ್ತಾನೆ.

ಸುದ್ದಿವಾಹಿನಿಗಳ ಇಂಥ ತಾಳ್ಮೆರಹಿತ ಗಡಿಬಿಡಿಯ ನಡುವೆ ನೋಡುಗರಾದ ನಾವು ಸುದ್ದಿ ಗ್ರಹಿಸಲು ತಡಬಡಾಯಿಸಬೇಕು. ಪತ್ರಿಕೆ ಎನ್ನುವುದು ಅವಸರದ ಸಾಹಿತ್ಯ, ಒಪ್ಪಿಕೊಳ್ಳಲೇ ಬೇಕು. ಆದರೆ ಅದನ್ನು ಓದುಗ ಅಥವಾ ನೋಡುಗರಿಗೆ ತಲುಪಿಸೋ ಮೊದಲು ಒಂದಷ್ಟು ಸಿದ್ಧ್ದತೆ ಮಾಡಿಕೊಳ್ಳುವ ತಾಳ್ಮೆ ಬೇಡವೇ? ತಕ್ಷಣಕ್ಕಾದರೂ ಅದಕ್ಕೆ ಒಂದಷ್ಟು ಪಾಲಿಷ್ ಹಾಕಬೇಕಲ್ಲವೇ? ಈ ತಾಳ್ಮೆ ಎಂಬ ವಿಟಮಿನಿನ ಕೊರತೆಯಿಂದಾಗಿ ಇಂದು ಸುದ್ದಿಗಳಿಗೆ ಬರವಿಲ್ಲ. ಆದರೆ ಯಾವುದರಲ್ಲೂ ಪರಿಪೂರ್ಣತೆ ಇಲ್ಲ.

ಇಂಥ ಕಾರಣಕ್ಕಾಗಿಯೇ ಬಹಳಷ್ಟು ಪತ್ರಕರ್ತರು ಹಣಕಾಸು, ಷೇರುಪೇಟೆ, ಪರ‍್ಯಾಯ ಇಂಧನ, ಇತ್ಯಾದಿ ಗಂಭೀರ ವಿಷಯಗಳ ಕುರಿತು ನಿಖರವಾಗಿ ಬರೆಯಲಾರರು. ಹೌದು. ಪತ್ರಕರ್ತರಲ್ಲಿ ಜಾಣತನವಿದೆ, ವೇಗವಿದೆ, ಚಾಕಚಕ್ಯತೆ ಇದೆ. ಆದರೆ ಕೊರತೆ ಮಾತ್ರ ಹಿಡಿ ತಾಳ್ಮೆ.
READ MORE - ಪತ್ರಕರ್ತರಿಗೆ ತಾಳ್ಮೆ ಒಂದಿದ್ದರೆ...!

ಪತ್ರಕರ್ತರ ಸಾಕ್ಷಿಪ್ರಜ್ಞೆ: ಪಿ ಸಾಯಿನಾಥ್

Friday, November 6, 2009


ವಿಜಯ್ ಜೋಶಿ ಧರ್ಮಸ್ಥಳದ ಉಜಿರೆ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಸ್ನಾತಕೋತ್ತರ ವಿದ್ಯಾರ್ಥಿ. ಮ್ಯಾಗ್ಸೆಸೆ ಪ್ರಶಸ್ತಿ ಪುರಸ್ಕೃತ ಪಿ. ಸಾಯಿನಾಥರನ್ನು ಕುರಿತ ಅವರ ಲೇಖನವನ್ನು ಓದಿ, ಅಭಿಪ್ರಾಯಿಸಿ.

ಪತ್ರಕರ್ತ ಪಿ ಸಾಯಿನಾಥ್ ಒಮ್ಮೆ ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯ ಫೆಲೋಶಿಪ್‌ಗಾಗಿ ಅರ್ಜಿ ಹಾಕಿದ್ದರು. ಅದರ ಸಂದರ್ಶನಕ್ಕಾಗಿ ಕರೆಯೂ ಬಂತು. ಟೈಮ್ಸ್ ಪತ್ರಿಕೆಯ ಸಂಪಾದಕರುಗಳ ಮುಂದೆ ಕುಳಿತು ತನಗೆ ಫೆಲೋಶಿಪ್ ಸಿಕ್ಕರೆ ಏನೇನು ಮಾಡುತ್ತೇನೆ ಎಂಬುದನ್ನು ಸವಿವರವಾಗಿ ಹೇಳುತ್ತಿದ್ದರು.

ಇಂದಿನ ಪತ್ರಿಕೆಗಳು ದೇಶದ ಸಾಮಾಜಿಕ ವ್ಯವಸ್ಥೆಯ ಮೇಲ್ಭಾಗದಲ್ಲಿರುವ ಶೇಕಡಾ ೫ ರಷ್ಟು ಮಂದಿಯ ಬಗ್ಗೆ ಮಾತ್ರ ಬರೆಯುತ್ತಿವೆ, ನಾನು ಈ ದೇಶದ ಸಾಮಾಜಿಕ ವ್ಯವಸ್ಥೆಯ ಕೆಳಭಾಗದಲ್ಲಿರುವ ಶೇಕಡಾ ೫ ರಷ್ಟು ಮಂದಿಯ ಬಗ್ಗೆ ಬರೆಯುತ್ತೇನೆ ಎಂದು ಅದಾಗಲೇ ತೀರ್ಮಾನಿಸಿದ್ದ ಪಿ ಸಾಯಿನಾಥ್ ಟೈಮ್ಸ್ ಧಣಿಗಳ ಮುಂದೆಯೂ ತಮಗಿರುವ ಗ್ರಾಮೀಣ ವರದಿಗಾರಿಕೆಯಲ್ಲಿನ ಆಸಕ್ತಿಯ ಕುರಿತು ಹೇಳಿದರು. ಆಗ ಟೈಮ್ಸ್‌ನ ಸಂಪಾದಕ ಮಹಾಶಯನೊಬ್ಬ ನಮ್ಮ ಪತ್ರಿಕೆಯ ಓದುಗರಿಗೆ ನೀವು ಬರೆಯುವ ಗ್ರಾಮೀಣ ವರದಿಯ ಬಗ್ಗೆ ಏನೂ ಆಸಕ್ತಿ ಇಲ್ಲ, ಏನು ಮಾಡ್ತೀರಾ ಎಂದು ಕೇಳಿದ.

ಓದುಗರಿಗೆ ಏನು ಬೇಕು, ಏನು ಬೇಡ ಎಂದು ಹೇಳಲು ನೀವು ನಿಮ್ಮ ಓದುಗರನ್ನು ಕೊನೆಯ ಬಾರಿ ಭೇಟಿಯಾಗಿದ್ದು ಯಾವಾಗ? ಎಂದು ಕೂಡಲೇ ಮರುಪ್ರಶ್ನಿಸಿದರು ಸಾಯಿನಾಥ್. ಸಾಯಿನಾಥ್ ಪ್ರಶ್ನೆ ಅದೆಷ್ಟು ತೀಕ್ಷ್ಣವಾಗಿತ್ತೆಂದರೆ ಅವರಿಗೆ ಸಂದರ್ಶನಕಾರರಿಂದ ತಿರುಗಿ ಪ್ರಶ್ನೆಯೇ ಬರಲಿಲ್ಲ. ಅದಲ್ಲದೆ ಅವರಿಗೆ ಟೈಮ್ಸ್‌ನ ಫೆಲೋಶಿಪ್ ಕೂಡ ದೊರೆಯಿತು.

ಪೇಜ್ ತ್ರಿ ಪತ್ರಿಕೋದ್ಯಮಕ್ಕೇ ಹೆಚ್ಚಿನ ಆದ್ಯತೆ ನೀಡುತ್ತಿದೆ ಎಂಬ ಆರೋಪಕ್ಕೆ ಈಡಾಗಿರುವ ಟೈಮ್ಸ್‌ನ ಧಣಿಗಳ ಮುಂದೆ ಕುಳಿತು ಅವರ ಬಾಯಿ ಮುಚ್ಚಿಸುವುದು ಬಹುಷಃ ಸಾಯಿನಾಥ್‌ಗೆ ಮಾತ್ರ ಸಾಧ್ಯವೇನೋ. ಸಿಂಹದ ಗುಹೆಗೆ ಹೋಗಿ ಅಲ್ಲಿಯೇ ಅದನ್ನು ಸೋಲಿಸುವುದೆಂದರೆ ಸಾಮಾನ್ಯದ ಮಾತೇ?

ಅಂಥ ಪತ್ರಕರ್ತ, ದಿ ಹಿಂದೂ ಪತ್ರಿಕೆಯ ಗ್ರಾಮೀಣ ವರದಿಗಾರ ಪಿ ಸಾಯಿನಾಥ್ ಯಾವತ್ತಿಗೂ ನನ್ನ ಪಾಲಿನ ಆದರ್ಶ.

ಟೈಮ್ಸ್‌ನ ಫೆಲೋಶಿಪ್ ಸಿಕ್ಕಿದ್ದೇ ತಡ ಸಾಯಿನಾಥ್ ದೇಶದ ಬಡ ಜಿಲ್ಲೆಗಳ ಹಾದಿ ಹಿಡಿದರು. ದೇಶದ ಐದು ರಾಜ್ಯಗಳ ಹತ್ತು ಬಡ ಜಿಲ್ಲೆಗಳನ್ನು ತಿರುಗಿದರು. ಈ ತಿರುಗಾಟದಲ್ಲಿ ಅವರು ಸುಮಾರು ಒಂದು ಲಕ್ಷ ಕಿಲೋಮೀಟರ್ ದೂರವನ್ನು ಕ್ರಮಿಸಿದ್ದರು. ಅದ್ದರಲ್ಲೂ ಐದು ಸಾವಿರ ಕಿಲೋಮೀಟರ್ ದೂರವನ್ನು ನಡೆದೇ ಕ್ರಮಿಸಿದ್ದರು! ಟೈಮ್ಸ್ ಆಫ್ ಇಂಡಿಯಾದಂತಹ ಪತ್ರಿಕೆಯೇ ಸಾಯಿನಾಥ್ ಅವರ ಒಟ್ಟೂ 84 ಗ್ರಾಮೀಣ ವರದಿಗಳನ್ನು 18 ತಿಂಗಳ ಅವಧಿಯಲ್ಲಿ ಪ್ರಕಟಿಸಿತು. ಮುಂದೆ ಆ ಲೇಖನಗಳೆಲ್ಲ ಒಟ್ಟಾಗಿ Everyone Loves A Good Drought ಎಂಬ ಹೆಸರಿನಲ್ಲಿ ಪುಸ್ತಕವಾಗಿ ಬಂತು. ಆ ಪುಸ್ತಕ ಇಂದಿಗೂ ಗ್ರಾಮೀಣ ವರದಿಗಾರಿಕೆಯ ಬಗ್ಗೆ ಆಸಕ್ತಿಯಿರುವ ಪತ್ರಿಕೋದ್ಯಮ ವಿದ್ಯಾರ್ಥಿಗಳು ಮತ್ತು ಪತ್ರಕರ್ತರ ಪಾಲಿಗೆ ಭಗವದ್ಗೀತೆಯಿದ್ದಂತೆ.

ಕೆಲ ಕನ್ನಡ ಟಿವಿ ವಾರ್ತಾ ವಾಹಿನಿಗಳನ್ನು ನೋಡಿಕೊಂಡು ಈ ಪತ್ರಕರ್ತರೆಲ್ಲ ಹೀಗೇ ಎಂದು ಮೂದಲಿಸುವ ಎಡಬಿಡಂಗಿಗಳಿಗೆ ಮತ್ತು ಕೆಲ ಕರಿ ಬಣ್ಣದ ಕನ್ನಡ ಟ್ಯಾಬ್ಲಾಯ್ಡ್‌ಗಳನ್ನು ಓದಿಕೊಂಡು ಪತ್ರಿಕೋದ್ಯಮ ಎಂದರೆ ಇಷ್ಟೇ ಎಂದು ಉಡಾಫೆಯಲ್ಲಿ ಮಾತನಾಡುವ ಅತಿಬುದ್ಧಿವಂತರಿಗೆ ಪತ್ರಿಕೋದ್ಯಮದ ಬಗ್ಗೆ ಅಭಿಮಾನ ಇರುವವರು ಹೆಮ್ಮೆಯಿಂದ ಕೇಳಬೇಕಾದ ಪ್ರಶ್ನೆ ಎಂದರೆ: ಸ್ವಾಮಿ, ನೀವು ಸಾಯಿನಾಥ್‌ರ ವರದಿಗಳನ್ನು ಓದಿದ್ದೀರಾ?.

ಸಾಯಿನಾಥ್‌ರ Everyone Loves A Good Drought ಪುಸ್ತಕ ಬಿಡುಗಡೆಯಾಗಿ ಎರಡು ವರ್ಷಗಳ ಕಾಲ ಟಾಪ್ ಟೆನ್ ಪುಸ್ತಗಳ ಸಾಲಿನಲ್ಲಿ ನಂಬರ್ ೧ ಆಗಿತ್ತು! ಅದಲ್ಲದೆ ನಂತರ ಖ್ಯಾತ ಪುಸ್ತಕ ಪ್ರಕಾಶನ ಸಂಸ್ಥೆ ಪೆಂಗ್ವಿನ್ ಇಂಡಿಯಾದವರ ಸಾರ್ವಕಾಲಿಕ ಶ್ರೇಷ್ಠ ಪುಸ್ತಕಗಳ ಸಾಲಿನಲ್ಲಿ ಅದು ಒಂದಾಗಿದೆ! ಅಷ್ಟೊಂದು ದೊಡ್ಡಮಟ್ಟದ ಮಾರಾಟ ಕಂಡ ಆ ಪುಸ್ತಕದ ರಾಯಲ್ಟಿಯ ಅಷ್ಟೂ ಹಣವನ್ನು ಸಾಯಿನಾಥ್ ಯುವ ಗ್ರಾಮೀಣ ವರದಿಗಾರರನ್ನು ಪ್ರೋತ್ಸಾಹಿಸಲು ವಿನಿಯೋಗಿಸಿದರು!! ಪತ್ರಿಕೋದ್ಯಮದಲ್ಲಿನ ಸಾಧನೆಗಾಗಿ ೨೦೦೭ನೆಯ ಇಸವಿಯ ಮ್ಯಾಗ್ಸೆಸೇ ಪ್ರಶಸ್ತಿ ಸಾಯಿನಾಥ್‌ರನ್ನು ಅರಸಿಕೊಂಡು ಬಂತು.

ಮಹಾರಾಷ್ಟ್ರದ ವಿದರ್ಭ ಪ್ರಾಂತ್ಯದ ರೈತರ ಆತ್ಮಹತ್ಯೆಗಳ ಬಗ್ಗೆ ಅವರು ಬರೆದ ಲೇಖನ ಮಾಲೆ ಪ್ರಧಾನಿ ಮನಮೋಹನ್ ಸಿಂಗ್ ವಿದರ್ಭಕ್ಕೆ ಧಾವಿಸಿ ಬರುವಂತೆ ಮಾಡಿತು. ಅಲ್ಲದೆ, ವಿದರ್ಭ ಪ್ರಾಂತ್ಯದ ರೈತರ ಕಲ್ಯಾಣಕ್ಕೆಂದೇ ವಿಶೇಷ ಆರ್ಥಿಕ ಪ್ಯಾಕೇಜ್ ಘೋಷಿಸುವಂತೆ ಮಾಡಿತು. ಪತ್ರಕರ್ತನ ಬರಹಗಳಿಂದ ಸಾಮಾಜಿಕ ಬದಲಾವಣೆ ಅಸಾಧ್ಯ ಎಂದು ಆರೋಪಿಸುವವರಿಗೆ ಮತ್ತು ವ್ಯವಸ್ಥೆಯ ವಿರುದ್ಧ ಎದ್ದು ನಿಲ್ಲುವ ತಾಕತ್ತನ್ನು ಪತ್ರಿಕೋದ್ಯಮ ಕಳೆದುಕೊಂಡಿದೆ ಎಂದು ಮಾತಾಡುವವರಿಗೆ ಉತ್ತರದಂತೆ ವಿದರ್ಭ ಘಟನೆ ನಮ್ಮ ಕಣ್ಣ ಮುಂದೆ ನಿಲ್ಲುತ್ತದೆ.

ಇರಲಿ, ಸಾಯಿನಾಥ್‌ರ ಸಾಧನೆಗಳು ಸಾಕಷ್ಟು ದೊಡ್ಡದಿದೆ.

ಸಾಯಿನಾಥ್‌ರಂತಹ ಪತ್ರಕರ್ತರು ಯಾವ ಪತ್ರಿಕೆಯಲ್ಲಿದ್ದರೂ ಅವರ ಇರುವಿಕೆಯೇ ಪತ್ರಿಕೋದ್ಯಮಕ್ಕೊಂದು ಹೆಮ್ಮೆ. ಅವರು ಕೇವಲ ತಾವು ಮಾತ್ರ ಬೆಳೆಯುವುದಿಲ್ಲ. ಇಡೀ ಜನ ಸಮೂಹವನ್ನು ಬೆಳೆಸುತ್ತಾರೆ. ಸಾಮಾಜಿಕ ಮೌಲ್ಯಗಳು ಕುಸಿಯುತ್ತಿರುವ ಸಂದರ್ಭದಲ್ಲಿಯೂ ತಾವು ನಂಬಿದ ಮೌಲ್ಯಗಳನ್ನು ಬಲವಾಗಿ ಪ್ರತಿಪಾದಿಸುತ್ತಾ ನಮಗೆಲ್ಲ ಹೊಸ ನಾಡಿನ, ರಸದ ಬೀಡಿನ ಭರವಸೆ ನೀಡುವ ರೂಪಕವಾಗಿ ಕಾಣಿಸುತ್ತಾರೆ.
READ MORE - ಪತ್ರಕರ್ತರ ಸಾಕ್ಷಿಪ್ರಜ್ಞೆ: ಪಿ ಸಾಯಿನಾಥ್